ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್‌ ಹಬ್ಬ ಆಚರಿಸಿದ ಪ್ರಧಾನಿ ಮೋದಿ

Untitled design 2026 01 14T125307.094

ನವದೆಹಲಿ: ಪೊಂಗಲ್ (Pongal) ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ತಮಿಳುನಾಡು ಹಾಗೂ ವಿಶ್ವದಾದ್ಯಂತ ವಾಸಿಸುವ ತಮಿಳರಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ದೆಹಲಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಪೊಂಗಲ್ ಆಚರಣೆಯಲ್ಲಿ ಪ್ರಧಾನಮಂತ್ರಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಸಂಭ್ರಮಕ್ಕೆ ಮೆರುಗು ತಂದರು.

ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸಚಿವ ಎಲ್. ಮುರುಗನ್ ಅವರು ತಮ್ಮ ದೆಹಲಿ ನಿವಾಸದಲ್ಲಿ ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದರು. ಪ್ರಧಾನಿಯ ಸಮ್ಮುಖದಲ್ಲೇ ಪರಂಪರೆಯಂತೆ ಪೊಂಗಲ್ ಬಡಿಸಲಾಗಿದ್ದು, ತಮಿಳು ಸಂಸ್ಕೃತಿಯ ಘಮಲು ಕಾರ್ಯಕ್ರಮದ ತುಂಬೆಲ್ಲ ಹರಡಿತ್ತು.

ಕಾರ್ಯಕ್ರಮದಲ್ಲಿ ನ್ಯಾಯಾಂಗ ಕ್ಷೇತ್ರದ ಗಣ್ಯರು, ವಿವಿಧ ಕ್ಷೇತ್ರಗಳ ತಜ್ಞರು, ಚಲನಚಿತ್ರ ನಟ-ನಟಿಯರು, ಸಂಗೀತಕಾರರು ಹಾಗೂ ಪತ್ರಿಕಾ ಪ್ರತಿನಿಧಿಗಳು ಭಾಗವಹಿಸಿದ್ದರು. ‘ಪರಾಶಕ್ತಿ’ ಚಿತ್ರತಂಡದ ಸದಸ್ಯರು ಈ ಉತ್ಸವದಲ್ಲಿ ಹಾಜರಿದ್ದರು. ನಟ ರವಿ ಮೋಹನ್ ತಮ್ಮ ಸ್ನೇಹಿತ ಕೆನಿಶಾ ಅವರೊಂದಿಗೆ ಆಗಮಿಸಿದ್ದರೆ, ನಟ ಶಿವಕಾರ್ತಿಕೇಯನ್ ಹಾಗೂ ಖ್ಯಾತ ಸಂಗೀತ ಸಂಯೋಜಕ ಜಿ.ವಿ. ಪ್ರಕಾಶ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪೊಂಗಲ್ ಹಬ್ಬದ ಮಹತ್ವವನ್ನು ವಿವರಿಸುತ್ತಾ ವಿಶೇಷ ಭಾಷಣ ಮಾಡಿದರು. “ಪೊಂಗಲ್ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ತಮಿಳಿನಲ್ಲಿ ಭಾಷಣ ಆರಂಭಿಸಿದ ಅವರು, ಪೊಂಗಲ್ ಇಂದು ಕೇವಲ ತಮಿಳುನಾಡಿನ ಹಬ್ಬವಾಗಿಲ್ಲ, ಅದು ಜಾಗತಿಕ ಮಟ್ಟದಲ್ಲಿ ಅಂತರರಾಷ್ಟ್ರೀಯ ಹಬ್ಬವಾಗಿ ರೂಪುಗೊಂಡಿದೆ ಎಂದು ಹೇಳಿದರು. ತಮಿಳು ಜನರೊಂದಿಗೆ ಈ ಹಬ್ಬವನ್ನು ಆಚರಿಸಲು ಸಂತೋಷವಾಗುತ್ತಿದೆ ಎಂದ ಅವರು, ಪೊಂಗಲ್ ಹಬ್ಬವು ರೈತರ ಜೀವನ ಮತ್ತು ಕೃಷಿಯೊಂದಿಗೆ ಗಾಢವಾದ ಸಂಬಂಧ ಹೊಂದಿದೆ ಎಂದು ವಿವರಿಸಿದರು.

“ಸಾವಿರ ವರ್ಷಗಳ ಹಿಂದೆ ಗಂಗೈಕೊಂಡ ಚೋಳಪುರದಲ್ಲಿಯೇ ಪೊಂಗಲ್ ಆಚರಣೆ ನಡೆಯುತ್ತಿತ್ತು. ಇದು ಕೃಷಿಯನ್ನು ಗೌರವಿಸುವ ಹಬ್ಬವಾಗಿದ್ದು, ತಮಿಳು ಸಾಹಿತ್ಯದ ಅಮೂಲ್ಯ ಗ್ರಂಥವಾದ ತಿರುಕ್ಕುರಳಲ್ಲಿಯೂ ರೈತರ ಮಹತ್ವವನ್ನು ವಿವರಿಸಲಾಗಿದೆ. ರೈತರು ಮತ್ತು ತಮಿಳು ಸಂಸ್ಕೃತಿಯ ನಡುವಿನ ಆಳವಾದ ಸಂಬಂಧವನ್ನು ಪೊಂಗಲ್ ಪ್ರತಿಬಿಂಬಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಗಳ ಕುರಿತು ಮಾತನಾಡಿದ ಅವರು, “ರೈತರ ಆದಾಯವನ್ನು ಹೆಚ್ಚಿಸುವುದು, ಅವರ ಜೀವನಮಟ್ಟವನ್ನು ಸುಧಾರಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಕೃಷಿಯು ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಸಾಗಬೇಕು ಎಂಬುದೇ ನಮ್ಮ ದೃಷ್ಟಿಕೋನ” ಎಂದು ಸ್ಪಷ್ಟಪಡಿಸಿದರು.

Exit mobile version