ಹೈದರಾಬಾದ್: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ತನ್ನ ಸಾಲ ತೀರಿಸಲು ಸ್ವಂತ ಪತ್ನಿಯನ್ನೇ ದಾಳವಾಗಿಸಿಕೊಂಡು, ನೂರಾರು ಪುರುಷರನ್ನು ಬ್ಲ್ಯಾಕ್‌ಮೇಲ್ ಮಾಡಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವ ಭೀಕರ ಘಟನೆ ಕರೀಂನಗರದಲ್ಲಿ ನಡೆದಿದೆ.
ಪೊಲೀಸರು ನೀಡಿದ ಮಾಹಿತಿಯಂತೆ, ಬಂಧಿತ ಮಹಿಳೆಯನ್ನು ಲಲಿತಾ ಎಂದು ಗುರುತಿಸಲಾಗಿದೆ. ಈಕೆ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ಪುರುಷರನ್ನು ಸಂಪರ್ಕಿಸುತ್ತಿದ್ದಳು. ಬಳಿ ಅವರೊಟ್ಟಿಗೆ ಅಕ್ಕರೆಯಿಂದ ಮಾತನಾಡಿ, ಅವರ ವಿಶ್ವಾಸ ಗಳಿಸುತ್ತಿದ್ದಳು. ನಂತರ ಅವರನ್ನು ತನ್ನ ಮನೆಗೆ ಕರೆಯುತಿದ್ದಳು.
ಇತ್ತ ಈಕೆಯ ಪತಿ, ಮನೆಗೆ ಬರುವ ಪುರುಷ ಹಾಗೂ ಆತನ ಪತ್ನಿಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಲು ಮನೆಯ ತುಂಬೆಲ್ಲಾ ಸೀಕ್ರೆಟ್ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದ. ಅವರ ಖಾಸಗಿ ಕ್ಷಣಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಬೆನ್ನಲ್ಲೇ ಈ ದಂಪತಿಗಳು ಸಂತ್ರಸ್ಥರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಹಣ ನೀಡದಿದ್ದರೆ ಈ ವಿಡಿಯೋಗಳನ್ನು ನಿಮ್ಮ ಕುಟುಂಬದವರಿಗೆ ಕಳುಹಿಸುತ್ತೇವೆ ಅಥವಾ ಇಂಟರ್ನೆಟ್‌ನಲ್ಲಿ ಹರಿಬಿಡುತ್ತೇವೆ ಎಂದು ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದರು.
ಇತ್ತೀಚೆಗೆ ಲಾರಿ ಮಾಲೀಕರೊಬ್ಬರು ಈ ದಂಪತಿಯ ಜಾಲಕ್ಕೆ ಬಿದ್ದಿದ್ದರು. ಈಗಾಗಲೇ ಅವರಿಗೆ 13 ಲಕ್ಷ ರೂಪಾಯಿ ನೀಡಿದ್ದರೂ, ಮತ್ತೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಲಾಗಿತ್ತು. ಇದರಿಂದ ಬೇಸತ್ತ ಲಾರಿ ಮಾಲೀಕ ಧೈರ್ಯ ಮಾಡಿ ಪೊಲೀಸರ ಮೊರೆ ಹೋದಾಗ ಈ ಬೃಹತ್ ಹನಿಟ್ರ್ಯಾಪ್ ಪ್ರಕರನ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ದಂಪತಿಗಳು ಬರೋಬ್ಬರಿ 100ಕ್ಕೂ ಹೆಚ್ಚು ಪುರುಷರಿಗೆ ಈ ರೀತಿ ಮೋಸ ಮಾಡಿರುವುದು ತಿಳಿದುಬಂದಿದೆ.
ದಂದೆಯಿಂದ ಬಂದ ಹಣದಲ್ಲಿ ಈ ದಂಪತಿಗಳು 65 ಲಕ್ಷ ರೂಪಾಯಿ ಮೌಲ್ಯದ ನಿವೇಶನ, 10 ಲಕ್ಷ ರೂಪಾಯಿ ಬೆಲೆಯ ಕಾರು ಮತ್ತು ಇತರೆ ಆಸ್ತಿಗಳನ್ನು ಖರೀದಿಸಿದ್ದರು. ಪತಿ ರಿಯಲ್ ಎಸ್ಟೇಟ್‌ನಲ್ಲಿ ಮಾಡಿಕೊಂಡಿದ್ದ ಸಾಲ ಹಾಗೂ ಬ್ಯಾಂಕ್ ಇಎಂಐಗಳನ್ನು ಇದೇ ಬ್ಲ್ಯಾಕ್‌ಮೇಲ್ ಹಣದಿಂದ ಪಾವತಿಸುತ್ತಿದ್ದರು. ಬಂಧಿತರಿಂದ ಹಲವಾರು ಮೊಬೈಲ್ ಫೋನ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ಈ ದಂಪತಿಯನ್ನು ಬಂಧಿಸಿದ್ದು, ಇವರಿಂದ ಮೋಸ ಹೋದವರು ಭಯಪಡದೆ ದೂರು ನೀಡುವಂತೆ ಮನವಿ ಮಾಡಿದ್ದಾರೆ. ಸಂತ್ರಸ್ತರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ.





