ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಉದ್ವಿಗ್ನತೆ ತುತ್ತುತುದಿಯಲ್ಲಿರುವಾಗ ರಾಜ್ಯಪಾಲರ ಕಾರ್ಯಕ್ರಮವು ಹೊಸ ಗೊಂದಲ ಸೃಷ್ಟಿಸಿದೆ. ಕೇರಳ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರು ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಇಂದು ಸಂಜೆ 7.10 ಕ್ಕೆ ಕೇರಳಕ್ಕೆ ವಾಪಸ್ ಆಗುವುದು ಬಹುತೇಕ ಫಿಕ್ಸ್ ಆಗಿದೆ.
ಈ ಪ್ರಯಾಣದಿಂದಾಗಿ ಟಿವಿಕೆ ನಾಯಕ ವಿಜಯ್ ಅವರೊಂದಿಗೆ ಇಂದು ಸಂಜೆ ರಾಜ್ಯಪಾಲರ ಭೇಟಿಯ ಸಾಧ್ಯತೆ ಬಹುತೇಕ ಅನಿಶ್ಚಿತವಾಗಿದೆ. ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಇಂದೇ ಗ್ರೀನ್ ಸಿಗ್ನಲ್ ಸಿಗುವುದೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ.
ವಿಸಿಕೆ ಪಕ್ಷವು ಟಿವಿಕೆಗೆ ಬೆಂಬಲ ನೀಡುವುದಾಗಿ ಅಧಿಕೃತ ಘೋಷಣೆ ಮಾಡಲು ಸಿದ್ಧವಾಗಿದೆ. ವಿಸಿಕೆ ಬೆಂಬಲ ಪತ್ರ ಇಂದು ಯಾವುದೇ ಸಮಯದಲ್ಲಿ ವಿಜಯ್ ಅವರಿಗೆ ಸಿಗುವ ಸಾಧ್ಯತೆ ಇದೆ. ಆದರೆ ರಾಜ್ಯಪಾಲ ಅರ್ಲೇಕರ್ ಅವರು ಸಂಜೆ 7.10 ಕ್ಕೆ ಕೇರಳಕ್ಕೆ ತೆರಳುವುದರಿಂದ ಬೆಂಬಲ ಪತ್ರ ಸಲ್ಲಿಕೆಯ ನಂತರವೂ ಇಂದು ಭೇಟಿ ಮತ್ತು ಸರ್ಕಾರ ರಚನೆಗೆ ಆಹ್ವಾನ ನೀಡುವ ಪ್ರಕ್ರಿಯೆ ಸಾಧ್ಯವಾಗದೇ ಉಳಿಯುವ ಅನುಮಾನಗಳು ಹೆಚ್ಚಿವೆ.
ಟಿವಿಕೆಗೆ ಈಗ 116 ಶಾಸಕರ ಬೆಂಬಲವಿದ್ದು, ವಿಸಿಕೆಯ 2 ಶಾಸಕರ ಬೆಂಬಲ ದೊರಕಿದಲ್ಲಿ ಬಹುಮತದ ಮ್ಯಾಜಿಕ್ ಅಂಕಿ 118 ತಲುಪುತ್ತದೆ. ಆದರೆ ರಾಜ್ಯಪಾಲರ ವಾಪಸ್ ಪ್ರಯಾಣದ ಕಾರಣ ಪ್ರಮಾಣ ವಚನ ಸಮಾರಂಭವು ಇನ್ನು ಕೆಲವು ದಿನಗಳ ಕಾಲ ಮುಂದೂಡಲ್ಪಡುವ ಸಾಧ್ಯತೆ ಹೆಚ್ಚಿದೆ.
ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿರುವುದೇನೆಂದರೆ – ವಿಸಿಕೆ ಬೆಂಬಲ ಪತ್ರ ಇಂದೇ ಸಿಕ್ಕರೂ ರಾಜ್ಯಪಾಲರು ಕೇರಳಕ್ಕೆ ತೆರಳುವುದರಿಂದ ಭೇಟಿ ಮತ್ತು ಅಧಿಕೃತ ಆಹ್ವಾನವು ನಾಳೆ ಅಥವಾ ನಂತರದ ದಿನಗಳಲ್ಲಿ ನಡೆಯಬಹುದು ಎಂಬುದು. ರಾಜ್ಯಪಾಲರು ಕೇರಳದಿಂದ ಮರಳಿ ಬಂದ ನಂತರವಷ್ಟೇ ಮುಂದಿನ ಕ್ರಮಗಳು ವೇಗವಾಗುವ ಸಾಧ್ಯತೆ ಇದೆ.
ತಮಿಳುನಾಡು ಜನತೆ ಈಗ ಸ್ಥಿರ ಸರ್ಕಾರ ರಚನೆಯಾಗಬೇಕು ಎಂಬ ಆತಂಕದಲ್ಲಿದ್ದಾರೆ. ರಾಜ್ಯಪಾಲರ ಕಚೇರಿ ಮತ್ತು ವಿಜಯ್ ನಿವಾಸದತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಇಂದು ಸಂಜೆ 7.10 ರ ನಂತರ ರಾಜಕೀಯ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದನ್ನು ರಾಜ್ಯ ಕಾದುನೋಡುತ್ತಿದೆ.
