ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಕೊನೆಯ ಕ್ಷಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಕೇರಳಕ್ಕೆ ತೆರಳುವ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇದರೊಂದಿಗೆ ಟಿವಿಕೆ ನಾಯಕ ವಿಜಯ್ ಅವರಿಗೆ ಸರ್ಕಾರ ರಚಿಸುವ ಅವಕಾಶ ಕೆಲವೇ ಕ್ಷಣಗಳಲ್ಲಿ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯಪಾಲರ ಕಚೇರಿಯಿಂದ ಬಿಡುಗಡೆಯಾದ ಮಾಹಿತಿ ಪ್ರಕಾರ, ಸಂಜೆ 6.30 ಕ್ಕೆ ವಿಜಯ್ ಅವರಿಗೆ ಸಮಯ ಕೊಡಲಾಗಿದೆ. ಟಿವಿಕೆ, ಕಾಂಗ್ರೆಸ್, ಸಿಪಿಐ, ಸಿಪಿಎಂ ಮತ್ತು ವಿಸಿಕೆ ಪಕ್ಷಗಳ ಬೆಂಬಲ ಪತ್ರಗಳೊಂದಿಗೆ ವಿಜಯ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕು ಮಂಡಿಸಲಿದ್ದಾರೆ.
ವಿಸಿಕೆಯು ಅಧಿಕೃತ ಬೆಂಬಲ ಘೋಷಿಸಿದ ನಂತರ ಟಿವಿಕೆಯ ಸಂಖ್ಯಾಬಲ 118 ಕ್ಕೆ ಏರಿಕೆಯಾಗಿದೆ. ಇದು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವಾಗಿದೆ. ಟಿವಿಕೆ-102, ಕಾಂಗ್ರೆಸ್-5, ಸಿಪಿಐ-2, ಸಿಪಿಎಂ-2 ಮತ್ತು ವಿಸಿಕೆ-2 ಒಟ್ಟು 118 ಶಾಸಕರ ಬೆಂಬಲ ವಿಜಯ್ ಅವರಿಗಿದೆ. ಕೆಲವು ಗಂಟೆಗಳ ಹಿಂದೆಯಷ್ಟೇ ಕೇರಳಕ್ಕೆ ಹೊರಡಲಿದ್ದ ರಾಜ್ಯಪಾಲ ಅರ್ಲೇಕರ್ ಅವರು, ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ.
ಇದರಿಂದ ಇಂದು ರಾತ್ರಿಯೇ ಅಥವಾ ನಾಳೆ ಬೆಳಗ್ಗೆ ವಿಜಯ್ ಅವರಿಗೆ ಸರ್ಕಾರ ರಚಿಸುವ ಆಹ್ವಾನ ಸಿಗುವ ಸಾಧ್ಯತೆ ಬಲವಾಗಿದೆ.ರಾಜಕೀಯ ವಲಯಗಳಲ್ಲಿ ಉದ್ವಿಗ್ನತೆ ತುತ್ತುತುದಿಯಲ್ಲಿದೆ. ವಿಜಯ್ ಅವರ ನಿವಾಸದ ಬಳಿ ಅಭಿಮಾನಿಗಳ ದಂಡು ಕೂಡಿದ್ದು, “ದಳಪತಿ ಸಿಎಂ” ಎಂಬ ಘೋಷಣೆಗಳು ಕೇಳಿಬರುತ್ತಿವೆ.
ಟಿವಿಕೆ ನಾಯಕರು ಸಂಜೆ 6.30 ರ ಭೇಟಿಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಮಿತ್ರಪಕ್ಷಗಳ ಶಾಸಕರೊಂದಿಗೆ ವಿಜಯ್ ಲೋಕಭವನಕ್ಕೆ ತೆರಳುವ ನಿರೀಕ್ಷೆಯಿದೆ.ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ ಅನಿಶ್ಚಿತತೆಗೆ ಫುಲ್ ಸ್ಟಾಪ್ ಹಾಕುವ ಸಾಧ್ಯತೆಯಿದೆ.
ವಿಜಯ್ ಅವರ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವುದು ಖಚಿತವಾಗಿದ್ದು, ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ರಾಜ್ಯಪಾಲರು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.ರಾಜ್ಯದ ಜನರು ಈ ಐತಿಹಾಸಿಕ ಕ್ಷಣಕ್ಕೆ ಕಾಯುತ್ತಿದ್ದಾರೆ. ನಟನಿಂದ ಮುಖ್ಯಮಂತ್ರಿಯಾಗುವ ವಿಜಯ್ ಅವರ ಪಯಣವು ಕೊನೆಗೂ ಗುರಿ ತಲುಪುವ ಹಂತಕ್ಕೆ ಬಂದಿದೆ.
