ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ರಾಜ್ಯದ ಜನರ ಗಮನ ಸೆಳೆಯುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬಸ್ ನಿಲ್ದಾಣಗಳ ಸಮೀಪ ಕಾರ್ಯನಿರ್ವಹಿಸುತ್ತಿದ್ದ 717 ಸರ್ಕಾರಿ ಸ್ವಾಮ್ಯದ ಟಾಸ್ಮ್ಯಾಕ್ (TASMAC) ಮದ್ಯದಂಗಡಿಗಳನ್ನು ಎರಡು ವಾರಗಳೊಳಗೆ ಮುಚ್ಚುವಂತೆ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿದ್ದಾರೆ.
ತಮಿಳುನಾಡು ಸರ್ಕಾರದ ಅಧೀನದಲ್ಲಿರುವ ಟಾಸ್ಮ್ಯಾಕ್ ಮಳಿಗೆಗಳು ರಾಜ್ಯದಲ್ಲಿ ಮದ್ಯ ಮಾರಾಟ ನಡೆಸುತ್ತಿವೆ. ಆದರೆ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಶಾಲೆಗಳು, ಕಾಲೇಜುಗಳು ಮತ್ತು ಪ್ರಮುಖ ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗೆ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿರುವುದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ಈ ಹಿನ್ನೆಲೆ ಮುಖ್ಯಮಂತ್ರಿ ವಿಜಯ್ ಈ ಮಹತ್ವದ ಕ್ರಮ ಕೈಗೊಂಡಿದ್ದಾರೆ.
ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ಪ್ರಸ್ತುತ 4,765 ಟಾಸ್ಮ್ಯಾಕ್ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 717 ಅಂಗಡಿಗಳನ್ನು ಮುಚ್ಚಲು ಗುರುತಿಸಲಾಗಿದೆ. ಈ ಪೈಕಿ 276 ಮಳಿಗೆಗಳು ಧಾರ್ಮಿಕ ಸ್ಥಳಗಳ ಸಮೀಪ, 186 ಶಿಕ್ಷಣ ಸಂಸ್ಥೆಗಳ ಬಳಿ ಹಾಗೂ 255 ಮದ್ಯದಂಗಡಿಗಳು ಬಸ್ ನಿಲ್ದಾಣಗಳ ಸಮೀಪ ಕಾರ್ಯನಿರ್ವಹಿಸುತ್ತಿದ್ದವು ಎನ್ನಲಾಗಿದೆ.
ಇದಕ್ಕೂ ಮೊದಲು ಮಹಿಳಾ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ವಿಜಯ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿತ್ತು. “ಸಿಂಗ ಪೆಣ್ ಸಿರಪ್ಪು ಮಾದಕವಸ್ತು ವಿರೋಧಿ ಪಡೆ” ಎಂಬ ವಿಶೇಷ ಘಟಕವನ್ನು ರಚಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಈ ವಿಶೇಷ ಪಡೆ ಮಹಿಳೆಯರ ಸುರಕ್ಷತೆ, ಮಾದಕವಸ್ತು ತಡೆ ಹಾಗೂ ಅಪರಾಧ ನಿಯಂತ್ರಣದ ಮೇಲೆ ವಿಶೇಷ ಗಮನ ಹರಿಸಲಿದೆ.
ಹೊಸ ಘಟಕಕ್ಕೆ ಮಹಿಳೆಯರು ಮತ್ತು ಯುವಕರು ಮಾದಕವಸ್ತು ಜಾಲಕ್ಕೆ ಸಿಲುಕದಂತೆ ತಡೆಯುವ ಜವಾಬ್ದಾರಿಯನ್ನು ನೀಡಲಾಗಿದೆ. ಜೊತೆಗೆ ಡ್ರಗ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ವಿಶೇಷ ಅಧಿಕಾರ ನೀಡಲಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಈ ಪಡೆ ರಾಜ್ಯಾದ್ಯಂತ ಕಾರ್ಯನಿರ್ವಹಿಸಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ವಿಶೇಷ ಘಟಕದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ. ಅಪರಾಧಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವುದರ ಜೊತೆಗೆ ಮಹಿಳೆಯರಲ್ಲಿ ಭದ್ರತಾ ಭಾವನೆ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
