ಯಾದಗಿರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆ ಗೋಡೆ ಕುಸಿದು 8 ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಈ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಈ ಮನಕಲಕುವ ಘಟನೆ ಸಂಭವಿಸಿದೆ.
ತುಮಕೂರು ಗ್ರಾಮದ ಸಿದ್ದಪ್ಪ ಎಂಬುವರಿಗೆ ಸೇರಿದ ಅಡುಗೆ ಮನೆಯ ಗೋಡೆ ನಿರಂತರ ಮಳೆಗೆ ಏಕಾಏಕಿ ಕುಸಿದಿದೆ. ಘಟನೆ ಸಂಭವಿಸಿದ ವೇಳೆ ಮನೆಯ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಗೋಡೆ ಮಕ್ಕಳ ಮೇಲೆ ಬಿದ್ದ ಪರಿಣಾಮ ಅಕ್ಷತಾ (8) ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯಲ್ಲಿ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಯ ನಂತರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಪಂ ಸಿಇಓ ಲವೀಶ್ ಒರಡಿಯಾ ಮತ್ತು ಎಸ್ಪಿ ಪೃಥ್ವಿಕ ಶಂಕರ್ ಸ್ಥಳಕ್ಕೆ ತೆರಳಿ ದುರಂತದ ಸಂಪೂರ್ಣ ಮಾಹಿತಿಯನ್ನು ಪಡೆದರು. ನಂತರ ಗಾಯಾಳುಗಳ ಆರೋಗ್ಯದ ಬಗ್ಗೆ ವಿಚಾರಿಸಿದರು.
ರಣಮಳೆಗೆ ಗೋಡೆ ಕುಸಿದು ಮಹಿಳೆ ಸಾವು
ಬೆಂಗಳೂರಿನ ಮಹದೇವಪುರದ ಚನ್ನಸಂದ್ರದಲ್ಲಿ ಇಂದು (ಮೇ 19, 2025) ಬೆಳಗ್ಗೆ ಭಾರೀ ಮಳೆಯಿಂದ ಉಂಟಾದ ದುರಂತದಲ್ಲಿ ಶಶಿಕಲಾ (31) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಐ ಝಡ್ ಕಂಪನಿಯಲ್ಲಿ ಹೌಸ್‌ಕೀಪಿಂಗ್ ಕೆಲಸಕ್ಕೆ ತೆರಳಿದ್ದ ವೇಳೆ ಕಾಂಪೌಂಡ್ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ.
ಶಹಾಪುರ ಮೂಲದ ಶಶಿಕಲಾ, ಇಬ್ಬರು ಸಣ್ಣ ಮಕ್ಕಳನ್ನು ಹೊಂದಿದ್ದು, ಗಂಡನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಂದು ಬೆಳಗ್ಗೆ ಕೆಲಸಕ್ಕೆ ತೆರಳಿದಾಗ, ರಾತ್ರಿಯಿಡೀ ಸುರಿದ ಮಳೆಗೆ ನೆನೆದಿದ್ದ ಕಾಂಪೌಂಡ್ ಗೋಡೆ ಅವರ ಮೇಲೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಸ್ಥಳಕ್ಕೆ ಮಹದೇವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಡೆ ಕುಸಿತಕ್ಕೆ ಭಾರೀ ಮಳೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಶಶಿಕಲಾ ಅವರ ಸಾವು ಕುಟುಂಬದ ಮೇಲೆ ದೊಡ್ಡ ಆಘಾತವನ್ನುಂಟುಮಾಡಿದೆ. ಇಬ್ಬರು ಸಣ್ಣ ಮಕ್ಕಳು ಮತ್ತು ಕೂಲಿ ಕೆಲಸಗಾರರಾದ ಗಂಡನಿಗೆ ಈ ದುರಂತವು ಭಾರೀ ಹೊಡೆತವಾಗಿದೆ. ಕುಟುಂಬಕ್ಕೆ ಸಾಂತ್ವನ ಸಂದೇಶಗಳು ಬಂದಿವೆ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಂತಹ ದುರಂತಗಳು ಸಂಭವಿಸುತ್ತಿವೆ. ಗೋಡೆ ಕುಸಿತ, ರಸ್ತೆ ಕುಸಿತ ಮತ್ತು ಜಲಾವೃತದಂತಹ ಸಮಸ್ಯೆಗಳು ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ. ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಸೂಕ್ತ ಕ್ರಮಗಳ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
