ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ಡಿಎಂಕೆ ನೇತೃತ್ವದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸರ್ಕಾರ ನಿರಂತರ ಹೋರಾಟ ನಡೆಸುತ್ತಿದೆ. ಈಗ ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ. ವಿಧಾನಸಭೆಯಲ್ಲಿ ಹೊಸ ಮಸೂದೆಯನ್ನು ಮಂಡಿಸುವ ಮೂಲಕ ಹಿಂದಿ ಚಲನಚಿತ್ರಗಳು, ಗೀತೆಗಳು, ಬೋರ್ಡ್‌ಗಳು ಮತ್ತು ಜಾಹೀರಾತುಗಳ ಮೇಲೆ ನಿರ್ಬಂಧ ಹೇರಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ಸರ್ಕಾರದ ಈ ನಿಲುವು ಹಿಂದಿನಿಂದಲೂ ಇರುವ ಭಾಷಾ ರಾಜಕೀಯದ ಭಾಗವಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ತ್ರಿಭಾಷಾ ಸೂತ್ರವನ್ನು ಹೇರಲು ಪ್ರಯತ್ನಿಸುತ್ತಿರುವುದರ ವಿರುದ್ಧ ಡಿಎಂಕೆ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶಾಲಾ ಪಠ್ಯಕ್ರಮದಲ್ಲಿ ಹಿಂದಿಯನ್ನು ಕಡ್ಡಾಯ ಮಾಡುವುದನ್ನು ವಿರೋಧಿಸಿ, ತಮಿಳು ಭಾಷೆಯನ್ನು ಮಾತ್ರ ಆದ್ಯತೆ ನೀಡುವಂತೆ ಒತ್ತಾಯಿಸುತ್ತಿದೆ. ಈಗ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ, ರಾಜ್ಯದಲ್ಲಿ ಹಿಂದಿ ಸಂಬಂಧಿತ ಎಲ್ಲಾ ಅಂಶಗಳನ್ನು ನಿಷೇಧಿಸುವ ಮಸೂದೆಯನ್ನು ತರಲು ತಯಾರಿ ನಡೆಸುತ್ತಿದೆ. ಹಿಂದಿ ಹೋರ್ಡಿಂಗ್ಸ್, ಸಿನಿಮಾ ಗೀತೆಗಳು, ಬೋರ್ಡ್‌ಗಳು ಮತ್ತು ಇತರ ಜಾಹೀರಾತುಗಳನ್ನು ನಿಷೇಧಿಸುವ ಮೂಲಕ ತಮಿಳು ಭಾಷೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
ಈ ಮಸೂದೆಯ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದ್ದು, ಸಂವಿಧಾನದ ಅನುಸಾರವೇ ಇದನ್ನು ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಡಿಎಂಕೆ ಹಿರಿಯ ನಾಯಕ ಟಿ.ಕೆ.ಎಸ್. ಎಲಂಗೋವನ್ ಅವರು ಪ್ರತಿಕ್ರಿಯಿಸಿ, “ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಸಂವಿಧಾನವನ್ನು ಪಾಲಿಸುತ್ತೇವೆ. ಹಿಂದಿ ಹೇರಿಕೆಯ ವಿರುದ್ಧ ಹೋರಾಡುತ್ತೇವೆ” ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ವಿನೋಜ್ ಸೆಲ್ವಂ ಅವರು ಈ ಮಸೂದೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. “ಇದು ಸ್ಟಾಲಿನ್ ಸರ್ಕಾರದ ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ. ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಿಕೊಳ್ಳಬಾರದು. ಇತ್ತೀಚಿನ ನ್ಯಾಯಾಲಯದ ಪ್ರಕರಣಗಳಲ್ಲಿ ಡಿಎಂಕೆ ಸರ್ಕಾರಕ್ಕೆ ಹಿನ್ನಡೆಯಾಗಿದೆ. ತನ್ನ ಲೋಪಗಳನ್ನು ಮುಚ್ಚಿಹಾಕಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಭಾಷಾ ವಿವಾದವನ್ನು ಬಳಸಿಕೊಳ್ಳುತ್ತಿದೆ. ಫಾಕ್ಸ್‌ಕಾನ್ ಹೂಡಿಕೆ ವಿಷಯದಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನವಿದು” ಎಂದು ಕಿಡಿಕಾರಿದ್ದಾರೆ..