ಬೆಂಗಳೂರು: ಭಾರತೀಯ ಸಂವಿಧಾನವು ಪರಿಶಿಷ್ಟ ಜಾತಿಗಳಿಗೆ (SC) ನೀಡಿರುವ ವಿಶೇಷ ರಕ್ಷಣೆ ಮತ್ತು ಮೀಸಲಾತಿ ಸೌಲಭ್ಯಗಳ ಕುರಿತು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಅನ್ಯ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗಳು ತಮ್ಮ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ತಕ್ಷಣವೇ ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ನೀಡಿರುವ ಈ ತೀರ್ಪು ಕರ್ನಾಟಕದ ಸಾವಿರಾರು ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಲಿದೆ.
ತೀರ್ಪಿನ ಸಾರಾಂಶವೇನು ?
1950ರ ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶದ ಪ್ಯಾರಾಗ್ರಾಫ್ 3ನ್ನು ಉಲ್ಲೇಖಿಸಿರುವ ನ್ಯಾಯಾಲಯ, ಎಸ್‌ಸಿ ಸ್ಥಾನಮಾನವು ಕೇವಲ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತ ಎಂದು ಹೇಳಿದೆ. ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು ಹುಟ್ಟಿನಿಂದ ದಲಿತರಾಗಿದ್ದರೂ ಸಹ, ಮತಾಂತರದ ಮರುಕ್ಷಣವೇ ಮೀಸಲಾತಿ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಕೇವಲ ಹಳೆಯ ಜಾತಿ ಪ್ರಮಾಣಪತ್ರವನ್ನು ಇಟ್ಟುಕೊಂಡು ಸೌಲಭ್ಯ ಪಡೆಯುವುದು ಕಾನೂನುಬಾಹಿರ ಎಂದು ಕೋರ್ಟ್ ಖಡಕ್ ಆಗಿ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಯಾರಿಗೆಲ್ಲಾ ಎಫೆಕ್ಟ್ ?
2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಸುಮಾರು 12,000ಕ್ಕೂ ಅಧಿಕ ದಲಿತ ಕ್ರಿಶ್ಚಿಯನ್ನರಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಈ ಕೆಳಗಿನ ಬದಲಾವಣೆಗಳಾಗಲಿವೆ:
-
ಕಾಯ್ದೆಯ ರಕ್ಷಣೆ ರದ್ದು: ಮತಾಂತರಗೊಂಡವರು ಇನ್ನು ಮುಂದೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಲು ಸಾಧ್ಯವಿಲ್ಲ. ಇದು ಅವರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.
-
ಶೈಕ್ಷಣಿಕ ಮತ್ತು ಉದ್ಯೋಗ ಸೌಲಭ್ಯ: ರಾಜ್ಯದ ಶೇ. 17ರಷ್ಟು ಎಸ್‌ಸಿ ಮೀಸಲಾತಿಯ ಲಾಭ ಇವರಿಗೆ ಸಿಗುವುದಿಲ್ಲ. ಇವರು ಒಬಿಸಿ ಅಥವಾ ಸಾಮಾನ್ಯ ವರ್ಗಕ್ಕೆ ಸೇರ್ಪಡೆಯಾಗಲಿದ್ದಾರೆ.
-
ಸರಕಾರಿ ಯೋಜನೆಗಳು: ಗಂಗಾ ಕಲ್ಯಾಣದಂತಹ ಎಸ್‌ಸಿ ಸಮುದಾಯಕ್ಕೆ ಮೀಸಲಾದ ಯೋಜನೆಗಳು ಮತ್ತು ಉದ್ಯೋಗದಲ್ಲಿನ ಬಡ್ತಿ (Promotion) ಸೌಲಭ್ಯಗಳು ಸ್ಥಗಿತಗೊಳ್ಳಲಿವೆ.
ಏನಿದು ಪಾಸ್ಟರ್ ಆನಂದ್ ಪ್ರಕರಣ ?
ಆಂಧ್ರಪ್ರದೇಶದ ಚಿಂತಾದ ಆನಂದ್ ಎಂಬುವವರ ಪ್ರಕರಣ ಈ ತೀರ್ಪಿಗೆ ಮೂಲ ಕಾರಣ. ಮಾದಿಗ ಸಮುದಾಯಕ್ಕೆ ಸೇರಿದ ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಪಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಅವರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ನೀಡಿದ್ದರು. ಆದರೆ, ಆನಂದ್ ಈಗ ಪಾಸ್ಟರ್ ಆಗಿರುವುದರಿಂದ ಅವರಿಗೆ ಎಸ್‌ಸಿ ರಕ್ಷಣೆ ಅನ್ವಯಿಸುವುದಿಲ್ಲ ಎಂಬ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಈಗ ಎತ್ತಿಹಿಡಿದಿದೆ.
ಈ ತೀರ್ಪು ಕರ್ನಾಟಕದ ರಾಜಕೀಯ ಅಖಾಡದಲ್ಲೂ ಧ್ರುವೀಕರಣಕ್ಕೆ ಕಾರಣವಾಗಬಹುದು. ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸುವ ಬಿಜೆಪಿ ನಿಲುವಿಗೆ ಇದು ಸಾಂವಿಧಾನಿಕ ಬಲ ನೀಡಿದೆ. ಮತ್ತೊಂದೆಡೆ, ದಲಿತ ಮತ್ತು ಕ್ರಿಶ್ಚಿಯನ್ ಮತಬ್ಯಾಂಕ್ ನೆಚ್ಚಿಕೊಂಡಿರುವ ಕಾಂಗ್ರೆಸ್‌ಗೆ ಇದು ಸವಾಲಾಗಿದೆ. ಈ ತೀರ್ಪಿನಿಂದಾಗಿ ಮತಾಂತರಗೊಂಡವರು ಮತ್ತೆ ಮಾತೃ ಧರ್ಮಕ್ಕೆ ಮರಳುವ (ಘರ್ ವಾಪಸಿ) ಪ್ರಕ್ರಿಯೆ ಹೆಚ್ಚಾಗಬಹುದು ಅಥವಾ ತಮ್ಮ ಮತಾಂತರವನ್ನು ಗೌಪ್ಯವಾಗಿಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
