ವಿಜಯಪುರ: ಸರ್ಕಾರಿ ಬಿಲ್ ಪಾವತಿಗಾಗಿ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ. ಕೆಬಿಜೆಎನ್‌ಎಲ್ (ಕರ್ನಾಟಕ ಭಗೀರಥ ಜಲ ನಿಗಮ ನಿಯಮಿತ) ಇಲಾಖೆಯ ಇಬ್ಬರು ಎಂಜಿನಿಯರಿಂಗ್ ಅಧಿಕಾರಿಗಳು ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತ ಅಧಿಕಾರಿಗಳನ್ನು ಕೆಬಿಜೆಎನ್‌ಎಲ್ ಉಪವಿಭಾಗ ಸಂಖ್ಯೆ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ್ ಚವ್ಹಾಣ ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ರೂಡಗಿ ಎಂದು ಗುರುತಿಸಲಾಗಿದೆ. ಈ ಇಬ್ಬರು ಅಧಿಕಾರಿಗಳು ಗುತ್ತಿಗೆದಾರರೊಬ್ಬರ ಬಾಕಿ ಬಿಲ್ ಪಾವತಿಸಲು ಒಟ್ಟು 18 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಕೆಬಿಜೆಎನ್‌ಎಲ್ ಕೆನಾಲ್ ಕಾಮಗಾರಿಗೆ ಸಂಬಂಧಿಸಿದ 3,71,419 ರೂಪಾಯಿ ಮೊತ್ತದ ಬಿಲ್ ಪಾವತಿಗಾಗಿ ಅಧಿಕಾರಿಗಳು ಲಂಚದ ಹಣಕ್ಕೆ ಒತ್ತಾಯಿಸಿದ್ದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ್ ಚವ್ಹಾಣ 10 ಸಾವಿರ ರೂಪಾಯಿ ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ರೂಡಗಿ 8 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಅಧಿಕಾರಿಗಳ ಲಂಚದ ಬೇಡಿಕೆಯಿಂದ ಬೇಸತ್ತ ನಾನಾಸಾಹೇಬ್ ರೂಡಗಿ ಅವರು ವಿಜಯಪುರ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ದೂರಿನ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪದ ಸತ್ಯಾಸತ್ಯತೆ ದೃಢಪಡಿಸಿಕೊಂಡು ಬಲೆ ಬೀಸುವ ಕಾರ್ಯಾಚರಣೆಗೆ ಮುಂದಾದರು.
ದೂರುದಾರರು ಅಧಿಕಾರಿಗಳಿಗೆ ಲಂಚದ ಹಣ ನೀಡಲು ತೆರಳಿದ ವೇಳೆ, ಪೂರ್ವಸಿದ್ಧತೆಯೊಂದಿಗೆ ಸ್ಥಳದಲ್ಲಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು. ಅಧಿಕಾರಿಗಳ ಬಳಿ ಇದ್ದ ಲಂಚದ ಹಣವನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆ ವೇಳೆ ಲೋಕಾಯುಕ್ತ ಅಧಿಕಾರಿಗಳು ಅಗತ್ಯ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಬಂಧಿತ ಅಧಿಕಾರಿಗಳ ವಿರುದ್ಧ ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
