ಬೆಂಗಳೂರು, ಜುಲೈ 28: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಆಗಸ್ಟ್ 13ರಿಂದ ಆಗಸ್ಟ್ 27ರವರೆಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದ್ದು, ಈ ಕುರಿತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆಯ ಪ್ರಕಾರ, ಆಗಸ್ಟ್ 13ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳ ಅಧಿವೇಶನ ಆರಂಭವಾಗಲಿದೆ. ರಾಜ್ಯದ ಆಡಳಿತಾತ್ಮಕ ಹಾಗೂ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಅಧಿವೇಶನ ಮಹತ್ವ ಪಡೆದುಕೊಂಡಿದೆ.
ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಯುತ್ತಿರುವ ಮೊದಲ ವಿಧಾನಮಂಡಲ ಅಧಿವೇಶನ ಇದಾಗಿದೆ. ಹೀಗಾಗಿ ಸರ್ಕಾರದ ಹೊಸ ಕಾರ್ಯಯೋಜನೆಗಳು, ಆಡಳಿತದ ಆದ್ಯತೆಗಳು ಹಾಗೂ ಪ್ರಮುಖ ನೀತಿ ವಿಚಾರಗಳು ಸದನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆಯ ನಂತರ ಹೊಸ ಸಚಿವರೊಂದಿಗೆ ಈ ಅಧಿವೇಶನ ನಡೆಯಲಿದೆ. ಮೂಲಗಳ ಪ್ರಕಾರ, ಹೊಸ ಸಂಪುಟದಲ್ಲಿ ಶೇ. 75ರಷ್ಟು ಹೊಸ ಮುಖಗಳು ಮತ್ತು ಶೇ. 25ರಷ್ಟು ಹಿರಿಯ ಸಚಿವರು ಇರಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಧಿವೇಶನದಲ್ಲಿ ಹೊಸ ಸಚಿವರ ಕಾರ್ಯವೈಖರಿ ಹಾಗೂ ಸರ್ಕಾರದ ಮುಂದಿನ ಹೆಜ್ಜೆಗಳ ಬಗ್ಗೆ ಗಮನ ಹರಿಸಲಾಗುತ್ತಿದೆ.
ಅಧಿವೇಶನದ ಅವಧಿಯಲ್ಲಿ ಕೆಲವು ದಿನಗಳು ಸಾರ್ವತ್ರಿಕ ರಜೆಯಾಗಿರುವುದರಿಂದ ಸದನದ ಕಾರ್ಯಕಲಾಪಗಳಿಗೆ ವಿರಾಮ ಇರಲಿದೆ. ಆಗಸ್ಟ್ 15, 16, 22, 23 ಮತ್ತು 26ರಂದು ರಜಾ ದಿನಗಳಾಗಿದ್ದು, ಆ ದಿನಗಳಲ್ಲಿ ವಿಧಾನಮಂಡಲದ ಕಲಾಪಗಳು ನಡೆಯುವುದಿಲ್ಲ.
ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ, ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಅಧ್ಯಕ್ಷ ಮತ್ತು ಸಭಾಪತಿ ಸ್ಥಾನಗಳಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಈ ಹಿಂದೆ ವಿಧಾನಸಭೆಯ ಅಧ್ಯಕ್ಷರಾಗಿದ್ದ ಯು.ಟಿ. ಖಾದರ್ ಅವರು ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಿರುವುದರಿಂದ, ಹೊಸ ವಿಧಾನಸಭಾಧ್ಯಕ್ಷರ ಆಯ್ಕೆ ಮಾಡಬೇಕಾಗಿದೆ.
ಇದೇ ರೀತಿ, ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನಕ್ಕೆ ಪಕ್ಷದ ಸದಸ್ಯರೊಬ್ಬರನ್ನು ನೇಮಕ ಮಾಡುವ ಕುರಿತು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಅಧಿವೇಶನದಲ್ಲಿ ಸರ್ಕಾರದ ನೀತಿಗಳು, ರಾಜ್ಯದ ಅಭಿವೃದ್ಧಿ ಯೋಜನೆಗಳು, ಆಡಳಿತಾತ್ಮಕ ವಿಚಾರಗಳು, ಬಿಡದಿ ಟೌನ್‌ಶಿಪ್ ಯೋಜನೆ, ಕೆಪಿಎಸ್‌ಸಿ ನೇಮಕಾತಿ ಹಗರಣ, ಬರಗಾಲ, ಬರ ಪರಿಹಾರ, ಪಂಚ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಮತ್ತು ಪರಿಷ್ಕರಣೆ, ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆದು ಹಲ್ಲೆ, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ, ಜಿಬಿಎ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಆರ್‌ಎಸ್‌ಎಸ್ ನೋಂದಣಿ, ರಾಮಮಂದಿರ ದೇಣಿಗೆ ಕಳ್ಳತನ, ನೀಟ್ ಹಗರಣ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಯಾಗುವ ನಿರೀಕ್ಷೆಯಿದೆ.
