ನವದೆಹಲಿ, ಜುಲೈ 17: ಆನ್‌ಲೈನ್ ಮೂಲಕ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡುವ ವೇಳೆ ಗ್ರಾಹಕರನ್ನು ದಾರಿ ತಪ್ಪಿಸುವ ಹಾಗೂ ಅವರನ್ನು ಆಕರ್ಷಿಸುವ ರೀತಿಯ ‘ಡಾರ್ಕ್ ಪ್ಯಾಟರ್ನ್’ (Dark Pattern) ಬಳಕೆ ಮಾಡಿದ ಆರೋಪದಲ್ಲಿ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 1 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಗ್ರಾಹಕರ ಹಕ್ಕುಗಳ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಕ್ರಮದ ಮೂಲಕ ಕೇಂದ್ರ ಸರ್ಕಾರ ನೀಡಿದೆ. ಈ ರೀತಿಯ ಕ್ರಮ ಕೇವಲ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗೆ ಮಾತ್ರವಲ್ಲ ಈ ರೀತಿ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುವಂತಹ ಉಳಿದ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೂ ಇದು ಎಚ್ಚರಿಕೆ ಆಗಿದೆ.
Consumer choice must be informed, not manipulated.
The Central Consumer Protection Authority (CCPA) has imposed a penalty on SpiceJet airlines for deploying deceptive "dark patterns" on its flight booking platform and directed the airline to permanently discontinue… pic.twitter.com/4WNtTP8cfA— Pralhad Joshi (@JoshiPralhad) July 17, 2026
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರ ಗಮನಕ್ಕೆ ಸ್ಪೈಸ್‌ಜೆಟ್‌ನ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಗ್ರಾಹಕರನ್ನು ತಪ್ಪು ದಾರಿಗೆಳೆಯುವ ವಿನ್ಯಾಸಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ತಕ್ಷಣವೇ ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ತನಿಖೆ ನಡೆಸಿದ CCPA ಅಧಿಕಾರಿಗಳು, ಸ್ಪೈಸ್‌ಜೆಟ್ ತನ್ನ ವೆಬ್‌ಸೈಟ್ ಮತ್ತು ಬುಕ್ಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ಸ್ಪಷ್ಟ ಅನುಮತಿಯಿಲ್ಲದೆ ಕೆಲವು ಆಯ್ಕೆಗಳನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಿರುವುದನ್ನು ಪತ್ತೆಹಚ್ಚಿದ್ದಾರೆ. ಟಿಕೆಟ್ ಬುಕ್ಕಿಂಗ್ ವೇಳೆ “ಸ್ಪೈಸ್ ಕ್ಲಬ್‌ನ ಆಫರ್‌ಗಳು, ಡೀಲ್‌ಗಳು ಮತ್ತು ಅಪ್‌ಡೇಟ್‌ಗಳನ್ನು ಸ್ವೀಕರಿಸಲು ನಾನು ಒಪ್ಪುತ್ತೇನೆ” ಎಂಬ ಆಯ್ಕೆಯನ್ನು ಮೊದಲೇ ಟಿಕ್ ಮಾಡಲಾಗುತ್ತಿತ್ತು. ಇದರಿಂದ ಗ್ರಾಹಕರು ತಿಳಿಯದೆಯೇ ಪ್ರಚಾರಾತ್ಮಕ ಸಂದೇಶಗಳನ್ನು ಸ್ವೀಕರಿಸುವ ಸ್ಥಿತಿ ನಿರ್ಮಾಣವಾಗುತ್ತಿತ್ತು.
ಇದರ ಜೊತೆಗೆ, “ಸೀಮಿತ ಅವಧಿಯ ಕೊಡುಗೆ”, “ಈಗಲೇ ಬುಕ್ ಮಾಡದಿದ್ದರೆ ದರ ಹೆಚ್ಚಾಗಬಹುದು” ಎಂಬ ಸಂದೇಶಗಳನ್ನು ತೋರಿಸುವ ಮೂಲಕ ಗ್ರಾಹಕರಲ್ಲಿ ತುರ್ತು ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಉಂಟು ಮಾಡಲಾಗುತ್ತಿತ್ತು. ಇಂತಹ ಕ್ರಮಗಳನ್ನು ಡಾರ್ಕ್ ಪ್ಯಾಟರ್ನ್ ಎಂದು ಕರೆಯಲಾಗುತ್ತದೆ. ಇದು ಗ್ರಾಹಕರ ಸ್ವತಂತ್ರ ಆಯ್ಕೆ ಮಾಡುವ ಹಕ್ಕಿಗೆ ಧಕ್ಕೆ ತರುವುದಾಗಿ CCPA ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ಗೆ ₹1 ಲಕ್ಷ ದಂಡ ವಿಧಿಸಿರುವ ಪ್ರಾಧಿಕಾರ, ಇಂತಹ ಗ್ರಾಹಕ ವಿರೋಧಿ ಪದ್ಧತಿಗಳನ್ನು ತಕ್ಷಣದಿಂದಲೇ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಸೇವೆಗೆ ಗ್ರಾಹಕರ ಒಪ್ಪಿಗೆಯನ್ನು ಸ್ಪಷ್ಟ, ಸ್ವಯಂಪ್ರೇರಿತ ಹಾಗೂ ಸಂಪೂರ್ಣ ಮಾಹಿತಿಯೊಂದಿಗೆ ಪಡೆಯಬೇಕು ಎಂದು ಆದೇಶಿಸಿದೆ.
ಈ ಕ್ರಮವು ಕೇವಲ ಸ್ಪೈಸ್‌ಜೆಟ್‌ಗೆ ಮಾತ್ರವಲ್ಲ, ಇತರ ಡಿಜಿಟಲ್ ಸೇವಾ ಸಂಸ್ಥೆಗಳಿಗೂ ಎಚ್ಚರಿಕೆಯ ಸಂದೇಶವಾಗಿದೆ. ಗ್ರಾಹಕರನ್ನು ಗೊಂದಲಕ್ಕೆ ಸಿಲುಕಿಸುವ ವಿನ್ಯಾಸಗಳು ಅಥವಾ ಪೂರ್ವನಿಯೋಜಿತ ಒಪ್ಪಿಗೆ ವಿಧಾನಗಳನ್ನು ಅನುಸರಿಸುವ ಸಂಸ್ಥೆಗಳ ವಿರುದ್ಧವೂ ಇದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು CCPA ಸ್ಪಷ್ಟಪಡಿಸಿದೆ.
