ಗುರುಗ್ರಾಮ್, ಮೇ 13: ಕಾಂಗ್ರೆಸ್ ಅಧಿನಾಯಕಿ ಮತ್ತು ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ (79) ಅವರು ಹರ್ಯಾಣದ ಗುರುಗ್ರಾಮ್‌ನಲ್ಲಿರುವ ಮೇದಾಂತ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಣ್ಣ ಶಸ್ತ್ರಚಿಕಿತ್ಸೆಗಾಗಿ ಅವರನ್ನು ದಾಖಲಿಸಲಾಗಿದ್ದು, ಆಸ್ಪತ್ರೆಯ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ.
ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಕಂಡುಬಂದ ಏರುಪೇರಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ನಿರಂತರ ಸಂಪರ್ಕದಲ್ಲಿದ್ದು, ತಾಯಿಯ ಆರೋಗ್ಯ ವಿಚಾರಿಸುತ್ತಿದ್ದಾರೆ.
ಮೇದಾಂತ ಆಸ್ಪತ್ರೆ, ಗುರುಗ್ರಾಮ್‌ನಲ್ಲಿ ಇರುವ ಖ್ಯಾತ ವೈದ್ಯಕೀಯ ಕೇಂದ್ರವಾದ ಮೇದಾಂತ್ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿಗೆ ಅಗತ್ಯವಾದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಆಸ್ಪತ್ರೆಯ ವಿಶೇಷ ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ. ಶಸ್ತ್ರಚಿಕಿತ್ಸೆಯ ನಿಖರ ಸ್ವರೂಪ ಬಹಿರಂಗಪಡಿಸಿಲ್ಲ.
ಕಳೆದ ಕೆಲವು ವರ್ಷಗಳಿಂದ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉಸಿರಾಟದ ತೊಂದರೆ, ಬ್ರಾಂಕಿಯಲ್ ಅಸ್ತಮಾ ಮತ್ತು ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ ಅವರು ಹಲವಾರು ಬಾರಿ ಆಸ್ಪತ್ರೆ ದಾಖಲಾಗಿದ್ದರು. ದೆಹಲಿಯ ಗಂಗಾರಾಮ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಅವರು ಚಿಕಿತ್ಸೆ ಪಡೆದಿರುವ ದಾಖಲೆಗಳಿವೆ. ದೆಹಲಿಯ ವಾಯುಮಾಲಿನ್ಯ ಹೆಚ್ಚಾದ ಸಂದರ್ಭಗಳಲ್ಲಿ ಅವರ ಉಸಿರಾಟದ ಸಮಸ್ಯೆ ತೀವ್ರಗೊಂಡಿತ್ತು ಎಂಬ ಮಾಹಿತಿ ಇದೆ.
2025ರಲ್ಲಿ ಕೂಡ ಅವರು ಹಲವಾರು ಬಾರಿ ಆಸ್ಪತ್ರೆ ದಾಖಲಾಗಿದ್ದರು. ಹೊಟ್ಟೆ ನೋವು ಹಾಗೂ ಉಸಿರಾಟದ ತೊಂದರೆಗಳ ಕಾರಣದಿಂದ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಸ್ಪತ್ರೆಯಲ್ಲಿ ಅವರ ಆರೈಕೆಯಲ್ಲಿ ಇದ್ದರು.
2026ರ ಆರಂಭದಲ್ಲಿಯೂ ಕೂಡ ಅವರ ಆರೋಗ್ಯದಲ್ಲಿ ಕೆಲವು ಏರುಪೇರು ಕಂಡುಬಂದಿತ್ತು. ಜನವರಿಯಲ್ಲಿ ಸಣ್ಣ ಪ್ರಮಾಣದ ಉಸಿರಾಟದ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆದಿದ್ದರು. ವೈದ್ಯರು ವಯೋಸಹಜ ಕಾರಣಗಳಿಂದ ನಿಯಮಿತ ಆರೋಗ್ಯ ಪರಿಶೀಲನೆ ಅಗತ್ಯವಿದೆ ಎಂದು ಸಲಹೆ ನೀಡಿದ್ದರು. ಇದರ ನಡುವೆ ಈಗ ಮತ್ತೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ ಎನ್ನಲಾಗಿದೆ.
