ಕಾಂಗ್ರೆಸ್ ಹೈಕಮಾಂಡ್‌‌‌‌ಗೆ ಸವಾಲಾಗಿದೆ ಕೇರಳ ಸಿಎಂ ಆಯ್ಕೆ..!

BeFunky collage (34)

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಐತಿಹಾಸಿಕ ವಿಜಯ ಸಾಧಿಸಿದ್ದರೂ, ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತೀವ್ರ ಗೊಂದಲಕ್ಕೆ ಸಿಲುಕಿದೆ. ಗಾಂಧಿ ಪರಿವಾರದಲ್ಲೇ ಭಿನ್ನಮತ ವ್ಯಕ್ತವಾಗುತ್ತಿರುವುದು ಹೈಕಮಾಂಡ್‌ಗೆ ಹೊಸ ತಲೆನೋವಾಗಿದೆ.

ರಾಹುಲ್ ಗಾಂಧಿ ಅವರು ತಮ್ಮ ಆಪ್ತ ನಾಯಕ ಕೆ.ಸಿ. ವೇಣುಗೋಪಾಲ್ ಅವರನ್ನು ಕೇರಳ ಮುಖ್ಯಮಂತ್ರಿಯಾಗಿ ನೋಡುವ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಿಯಾಂಕಾ ಗಾಂಧಿ ವಡ್ರಾ ಅವರು ವಿಪಕ್ಷ ನಾಯಕ ವಿ.ಡಿ. ಸತೀಶನ್ ಅವರ ಪರವಾಗಿ ಬಲವಾದ ಬೆಂಬಲ ನೀಡುತ್ತಿದ್ದಾರೆ.

ಕೆ.ಸಿ. ವೇಣುಗೋಪಾಲ್ ಯಾರು?

ಎಐಸಿಸಿ ಜನರಲ್ ಸೆಕ್ರಟರಿ (ಸಂಘಟನೆ) ಆಗಿರುವ ಕೆ.ಸಿ. ವೇಣುಗೋಪಾಲ್ ರಾಹುಲ್ ಗಾಂಧಿ ಅವರ ನಿಕಟವರ್ತಿ ಮತ್ತು ಆಪ್ತ ಸಹಯೋಗಿ. ಹೈಕಮಾಂಡ್‌ನಲ್ಲಿ ಅವರಿಗೆ ಬಲವಾದ ಬೆಂಬಲವಿದೆ. ಆದರೆ ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂಬುದು ವಿರೋಧಿಗಳ ವಾದ.

ವಿ.ಡಿ. ಸತೀಶನ್ ಪರ ಬಲವಾದ ವಾದ ವಿ.ಡಿ. ಸತೀಶನ್ ಅವರು ಕೇರಳ ಕಾಂಗ್ರೆಸ್‌ನ ನೆಲಮಟ್ಟದ ನಾಯಕ. ಎಡಪಂಥೀಯರ ವಿರುದ್ಧ ತೀವ್ರ ಹೋರಾಟ ನಡೆಸಿ, ವಿಪಕ್ಷ ನಾಯಕರಾಗಿ ಪಕ್ಷಕ್ಕೆ ಗೆಲುವು ತಂದುಕೊಟ್ಟ ನಾಯಕ ಎಂದು ಅವರನ್ನು ಬಣ್ಣಿಸಲಾಗುತ್ತಿದೆ. ಮುಸ್ಲಿಂ ಲೀಗ್ ಸೇರಿದಂತೆ ಮಿತ್ರಪಕ್ಷಗಳೂ ಸತೀಶನ್ ಅವರಿಗೆ ಬೆಂಬಲ ವ್ಯಕ್ತಪಡಿಸಿವೆ. ದಿಲ್ಲಿಯಲ್ಲಿ ನಡೆದ ಸಂಧಾನ ಸಭೆಯಲ್ಲೂ ಪ್ರಿಯಾಂಕಾ ಗಾಂಧಿ ಅವರು ಸತೀಶನ್ ಪರವಾಗಿ ಬ್ಯಾಟಿಂಗ್ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳದಲ್ಲಿ ಯುಡಿಎಫ್‌ನ ಭರ್ಜರಿ ಗೆಲುವಿನ ನಂತರವೂ ಮುಖ್ಯಮಂತ್ರಿ ಆಯ್ಕೆಯಲ್ಲಿ ಉದ್ಭವವಾಗಿರುವ ಈ ಭಿನ್ನಾಭಿಪ್ರಾಯವು ಪಕ್ಷದ ಒಳಜಗಳವನ್ನು ಮತ್ತೆ ಬೆಳಕಿಗೆ ತಂದಿದೆ. ಹೈಕಮಾಂಡ್ ಶೀಘ್ರವೇ ನಿರ್ಧಾರಕ್ಕೆ ಬರಬೇಕಿದೆ.

Exit mobile version