ತಿರುಪತ್ತೂರು: ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಇನ್ಸ್‌ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಮಾಧ್ಯಮಗಳು ನೂರಾರು ಬಾಲಕಿಯರ ಬದುಕನ್ನು ಹಾಳುಮಾಡಿದೆ. ಇತ್ತೀಚೆಗೆ ನಡೆದ ಜಿಲ್ಲಾಡಳಿತದ ತನಿಖೆಯಲ್ಲಿ, ಸಾಮಾಜಿಕ ಜಾಲತಾಣದ ವ್ಯಾಮೋಹದಿಂದ ನಡೆದ ಬಾಲ್ಯ ವಿವಾಹಗಳ ಪರಿಣಾಮವಾಗಿ ನೂರಾರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿರುವುದು ಬೆಳಕಿಗೆ ಬಂದಿದ್ದು, ಇಡೀ ರಾಜ್ಯವನ್ನೇ ಸಂಚಲನ ಮೂಡಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೇಮ
ತಿರುಪತ್ತೂರು ಜಿಲ್ಲೆಯ ಆಂಬೂರು, ವಾಣಿಯಂಬಾಡಿ, ನಾಟ್ರಂಪಳ್ಳಿ ಮತ್ತು ತಿರುಪತ್ತೂರು ತಾಲ್ಲೂಕುಗಳಲ್ಲಿ 2025ರ ಅವಧಿಯಲ್ಲಿ ಅಸಹಜ ಸಂಖ್ಯೆಯಲ್ಲಿ ಬಾಲ್ಯ ವಿವಾಹಗಳು ನಡೆದಿವೆ. ತನಿಖೆಯಲ್ಲಿ ತಿಳಿದುಬಂದಿರುವಂತೆ, ಈ ಹೆಚ್ಚಿನ ವಿವಾಹಗಳಿಗೆ ಮೂಲ ಕಾರಣ ಇನ್ಸ್‌ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್. ಅಪ್ರಾಪ್ತ ಬಾಲಕಿಯರು ಈ ಸಾಮಾಜಿಕ ಜಾಲತಾಣದಲ್ಲಿ ಸಿಗುವ ಯುವಕರೊಂದಿಗೆ ಪ್ರೀತಿ ಪ್ರೇಮ ಎಂದು ಮನೆಯವರಿಗೂ ತಿಳಿಯದಂತೆ ರಾಜ್ಯದ ಗಡಿ ದಾಟಿ ವಿವಾಹ ಮಾಡಿಕೊಂಡಿದ್ದಾರೆ.
ಈ ಪ್ರಕರಣಗಳು ತಿರುಪತ್ತೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಮೂಲಕ ಬೆಳಕಿಗೆ ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ಆಸ್ಪತ್ರೆಗೆ ಬರುವ ಗರ್ಭಿಣಿಯರಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದು ಜಿಲ್ಲಾಡಳಿತದ ನಿದ್ದೆ ಕೆಡಿಸಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಪಕ್ವವಾಗುವ ಮೊದಲೇ ಗರ್ಭ ಧರಿಸುತ್ತಿರುವುದರಿಂದ ಬಾಲಕಿಯರ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಆರೋಗ್ಯ ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈಗ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
300ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲು:
ಈ ಗಂಭೀರ ಸಮಸ್ಯೆಯನ್ನ ಮಟ್ಟಹಾಕಲು ತಿರುಪತ್ತೂರು ಪೊಲೀಸರು ದಕ್ಷ ಕ್ರಮಕ್ಕೆ ಮುಂದಾಗಿದ್ದಾರೆ. ಅಪ್ರಾಪ್ತೆಯರನ್ನು ವಿವಾಹವಾಗಿ ಗರ್ಭಿಣಿ ಮಾಡಿದ ಸುಮಾರು 300ಕ್ಕೂ ಹೆಚ್ಚು ಯುವಕರ ವಿರುದ್ಧ ಫೋಕ್ಸೊ (POCSO) ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೇವಲ ಯುವಕರಷ್ಟೇ ಅಲ್ಲದೆ, ಇಂತಹ ವಿವಾಹಗಳಿಗೆ ಪ್ರೋತ್ಸಾಹ ನೀಡಿದ ಅಥವಾ ಮಾಹಿತಿ ಮುಚ್ಚಿಟ್ಟ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳಲು ಮಂದಾಗಿದೆ.
ಸಾಮಾಜಿಕ ಜಾಗೃತಿಯ ಕೊರತೆ ಮತ್ತು ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯೇ ಈ ಅನಾಹುತಕ್ಕೆ ಮುಖ್ಯ ಕಾರಣವೆಂದು ಗುರುತಿಸಲಾಗಿದೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹವನ್ನು ಸಹಿಸುವುದಿಲ್ಲ. ಮಾಹಿತಿ ಸಿಕ್ಕ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.





