ಗ್ಯಾಂಗ್ಟಾಕ್: ಪ್ರಕೃತಿಯ ಸೌಂದರ್ಯಕ್ಕೆ ಹೆಸರಾದ ಸಿಕ್ಕಿಂನಲ್ಲಿ ಹಠಾತ್ ಹವಾಮಾನ ವೈಪರೀತ್ಯ ಉಂಟಾಗಿದ್ದು, ಭಾರೀ ಹಿಮಪಾತದಿಂದಾಗಿ ಸಾವಿರಾರು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಸಿಕ್ಕಿಂನ ಶೇರಥಾಂಗ್ ಮತ್ತು ಪ್ರಸಿದ್ಧ ಪ್ರವಾಸಿ ತಾಣವಾದ ತ್ತೊಮೊ ಸರೋವರದ (Tsomgo Lake) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಹಿಮದ ಮಳೆ ಸುರಿದಿದ್ದರಿಂದ ನೂರಾರು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ಸಿಕ್ಕಿಂ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ವರದಿಯ ಪ್ರಕಾರ, ಹಿಮಪಾತದ ತೀವ್ರತೆಗೆ ಸುಮಾರು 541 ಪ್ರವಾಸಿ ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡಿದ್ದವು. ಈ ವಾಹನಗಳಲ್ಲಿ ಮಕ್ಕಳೂ ಸೇರಿದಂತೆ ಒಟ್ಟು 2,736 ಪ್ರವಾಸಿಗರು ಇದ್ದರು. ರಸ್ತೆಯುದ್ದಕ್ಕೂ ಹಿಮದ ದಪ್ಪ ಪದರ ನಿರ್ಮಾಣವಾದ್ದರಿಂದ ವಾಹನಗಳು ಚಲಿಸಲಾಗದೆ ಪ್ರವಾಸಿಗರು ಹೈರಾಣಾಗಿದ್ದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಕ್ಕಿಂ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಿತು. ಈ ಕಾರ್ಯಾಚರಣೆಯಲ್ಲಿ, ಸಿಕ್ಕಿಂ ಪೊಲೀಸ್ ಮತ್ತು ಚೆಕ್ ಪೋಸ್ಟ್ ಅಧಿಕಾರಿಗಳು, GREF/BRO (ಗಡಿ ರಸ್ತೆಗಳ ಸಂಸ್ಥೆ) ಸಿಬ್ಬಂದಿ, ಜೆಎನ್ ರಸ್ತೆ ಚಾಲಕರ ಸಂಘ ಮತ್ತು ಟ್ರಾವೆಲ್ ಏಜೆನ್ಸಿಗಳು ಮತ್ತು ಪ್ರವಾಸೋದ್ಯಮ ಪರವಾನಗಿ ಕೋಶದ ಅಧಿಕಾರಿಗಳು ಸೇರಿ ಪ್ರವಾಸಿಗರನ್ನ ರಕ್ಷಣೆ ಮಾಡಿದ್ದಾರೆ.
ಹಿಮವನ್ನು ತೆರವುಗೊಳಿಸಲು ಮತ್ತು ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸ್ಥಳೀಯ ಪಾಲುದಾರರೊಂದಿಗೆ ಈ ತಂಡಗಳು ಸಮನ್ವಯ ಸಾಧಿಸಿದವು. ತೀವ್ರ ಚಳಿ ಮತ್ತು ದುರ್ಗಮ ಹಾದಿಯ ನಡುವೆಯೂ ಅಧಿಕಾರಿಗಳು ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಕ್ಷಣೆ ಕಾರ್ಯಚರಣೆ ಯಶಸ್ವಿಯಾಗಿದ್ದರಿಂದ ಸಿಲುಕಿಕೊಂಡಿದ್ದ ಎಲ್ಲಾ 541 ವಾಹನಗಳು ಮತ್ತು 2,736 ಪ್ರವಾಸಿಗರನ್ನು ಯಾವುದೇ ಪ್ರಾಣಾಪಾಯವಿಲ್ಲದೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಪ್ರವಾಸಿಗರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ವಿಶೇಷ ಮೇಲ್ವಿಚಾರಣೆ ನಡೆಸಿತ್ತು.
ಪ್ರವಾಸೋದ್ಯಮ ಇಲಾಖೆಯು ಪೊಲೀಸ್ ಸಿಬ್ಬಂದಿ, BRO ಕಾರ್ಮಿಕರು ಮತ್ತು ಚಾಲಕ ಸಂಘಗಳಿಗೆ ತನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸಿದೆ. ಎಲ್ಲಾ ಅಧಿಕಾರಿಗಳ ತ್ವರಿತ ಪ್ರತಿಕ್ರಿಯೆ ಮತ್ತು ಸಂಘಟಿತ ಕೆಲಸದಿಂದಾಗಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಪ್ರವಾಸಿಗರಿಗೆ ಸಿಕ್ಕಿಂ ಪ್ರವಾಸವು ಒಂದು ಕರಾಳ ನೆನಪಾಗುವ ಬದಲು, ಅಲ್ಲಿನ ಸರ್ಕಾರದ ತ್ವರಿತ ಸ್ಪಂದನೆಯಿಂದಾಗಿ ಸುರಕ್ಷಿತವಾಗಿ ಮುಕ್ತಾಯಗೊಂಡಿದೆ. ಸದ್ಯ ಹಿಮಪಾತ ಪೀಡಿತ ಪ್ರದೇಶಗಳಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗಿದ್ದು, ಹವಾಮಾನ ಮುನ್ಸೂಚನೆಯನ್ನು ಗಮನಿಸಿ ಪ್ರವಾಸ ಕೈಗೊಳ್ಳಲು ಸೂಚಿಸಲಾಗಿದೆ.





