ನವದೆಹಲಿ, ಅಕ್ಟೋಬರ್ 29: ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನವನ್ನು ಹಾರಿಸಿದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಗೌರವಿಸಿದ್ದಾರೆ. ಈ ಭೇಟಿಯು ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ನಡೆದಿದ್ದು, ಶಿವಾಂಗಿ ಸಿಂಗ್ ರಾಷ್ಟ್ರಪತಿಗಳೊಂದಿಗೆ ರಫೇಲ್ ವಿಮಾನದಲ್ಲಿ ಫೋಟೊ ತೆಗೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳೊಂದಿಗೆ ರಫೇಲ್ ವಿಮಾನವನ್ನು ಶಿವಾಂಗಿ ಹಾರಿಸಿದ್ದಾರೆ. ಇದೇ ವೇಳೆ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತೊಂದು ಯುದ್ಧ ವಿಮಾನವನ್ನು ಹಾರಿಸಿದ್ದಾರೆ.
ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಿದಾಗ, ಪಾಕಿಸ್ತಾನವು ಭಾರತೀಯ ಮಹಿಳಾ ಪೈಲಟ್‌ನನ್ನು ಸೆರೆಹಿಡಿದಿರುವುದಾಗಿ ಸುಳ್ಳು ಆರೋಪ ಮಾಡಿತ್ತು. ಶಿವಾಂಗಿ ಸಿಂಗ್‌ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡಿತ್ತು. ಆದರೆ, ಭಾರತವು ಒಂದೇ ಒಂದು ಫೋಟೊ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಈ ಸುಳ್ಳುಗಳನ್ನು ಬಯಲಿಗೆಳೆದಿತ್ತು.
President Droupadi Murmu took a sortie in a Rafale aircraft at Air Force Station, Ambala, Haryana. She is the first President of India to take sortie in two fighter aircrafts of the Indian Air Force. Earlier, she took a sortie in Sukhoi 30 MKI in 2023. pic.twitter.com/Rvj1ebaCou
— President of India (@rashtrapatibhvn) October 29, 2025
ಉತ್ತರ ಪ್ರದೇಶದ ವಾರಾಣಸಿಯ ಫುಲ್ವಾರಿಯಾದಲ್ಲಿ ಜನಿಸಿದ ಶಿವಾಂಗಿ ಸಿಂಗ್, ಚಿಕ್ಕ ವಯಸ್ಸಿನಿಂದಲೇ ದೊಡ್ಡ ಕನಸುಗಳನ್ನು ಕಂಡವರು. ಅವರ ತಂದೆ ಕುಮಾರೇಶ್ವರ ಸಿಂಗ್ ಮತ್ತು ತಾಯಿ ಸೀಮಾ ಸಿಂಗ್‌ರ ಕುಟುಂಬದಲ್ಲಿ ದೇಶಭಕ್ತಿಯ ಆದರ್ಶವು ಆಳವಾಗಿ ಬೇರೂರಿತ್ತು. ಶಿವಾಂಗಿಯವರ ತಾಯಿಯ ಅಜ್ಜ ಬಿ.ಎನ್. ಸಿಂಗ್ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರು. ಶಿವಾಂಗಿ ವಾರಾಣಸಿಯ ಸೇಂಟ್ ಮೇರಿ ಶಾಲೆ ಮತ್ತು ಸೇಂಟ್ ಜಾರ್ಜ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದರು. 12ನೇ ತರಗತಿಯಲ್ಲಿ ಶೇ.89ರಷ್ಟು ಅಂಕ ಗಳಿಸಿದ ಅವರು, ಭಗವಾನ್‌ಪುರದ ಸನ್‌ಬೀಮ್ ಮಹಿಳಾ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದರು.
ಶಿಕ್ಷಣದ ಜೊತೆಗೆ, ಶಿವಾಂಗಿ ಎನ್‌ಸಿಸಿಯಲ್ಲಿ ಸೇರಿಕೊಂಡು ಮಿಲಿಟರಿ ಕನಸುಗಳನ್ನು ರೂಪಿಸಿದರು. ಕ್ರೀಡೆಯಲ್ಲಿಯೂ ಅವರು ಪ್ರವೀಣರಾಗಿದ್ದು, ಜಾವೆಲಿನ್ ಥ್ರೋನಲ್ಲಿ ರಾಷ್ಟ್ರೀಯ ಚಿನ್ನದ ಪದಕವನ್ನು ಗೆದ್ದಿದ್ದಾರೆ. 2013ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಉತ್ತರ ಪ್ರದೇಶದ ಎನ್‌ಸಿಸಿ ತುಕಡಿಯನ್ನು ಪ್ರತಿನಿಧಿಸಿದ್ದರು. ಒಮ್ಮೆ ತಾಯಿಯ ಅಜ್ಜನೊಂದಿಗೆ ವಾಯುಪಡೆಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ, ಯುದ್ಧ ವಿಮಾನ ಪೈಲಟ್ ಆಗುವ ಕನಸು ಅವರಲ್ಲಿ ಮೂಡಿತು.
2015ರಲ್ಲಿ ಶಿವಾಂಗಿ ಭಾರತೀಯ ವಾಯುಪಡೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಒಂದೂವರೆ ವರ್ಷಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದರು. 2017ರಲ್ಲಿ, ದೇಶದ ಮೊದಲ ಐದು ಮಹಿಳಾ ಯುದ್ಧ ವಿಮಾನ ಪೈಲಟ್‌ಗಳ ಐತಿಹಾಸಿಕ ತಂಡದಲ್ಲಿ ಸ್ಥಾನ ಪಡೆದರು. ತರಬೇತಿಯ ನಂತರ, ಅವರು MiG-21 ಸೂಪರ್‌ಸಾನಿಕ್ ಯುದ್ಧ ವಿಮಾನವನ್ನು ಹಾರಿಸಿದರು. ರಾಜಸ್ಥಾನದ ವಾಯುನೆಲೆಯಲ್ಲಿ, ಪಾಕಿಸ್ತಾನ ಗಡಿಯ ಸಮೀಪ ನಿಯೋಜನೆಗೊಂಡ ಅವರು, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರೊಂದಿಗೆ ಕೆಲಸ ಮಾಡಿದ್ದರು.





