ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೇ ಬೇಡವೇ ಎಂಬ ವಿಷಯವು ದಶಕಗಳಿಂದ ಚರ್ಚೆಯ ವಿಷಯವಾಗಿದೆ. ಆದರೆ, ಈ ವಿವಾದದ ನಡುವೆಯೂ ಮಕ್ಕಳ ಮಾನಸಿಕ ಮತ್ತು ದೈಹಿಕ ಸುರಕ್ಷತೆಗೆ ಇದು ಅತ್ಯಗತ್ಯ ಎಂಬ ಸತ್ಯವನ್ನು ಎತ್ತಿ ತೋರಿಸುವಂತಹ ಒಂದು ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಆರಾಧೆ ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣವನ್ನು ಸೇರಿಸುವ ಬಗ್ಗೆ ಮಹತ್ವಪೂರ್ಣ ಮಾರ್ಗದರ್ಶನ ನೀಡದ್ದಾರೆ.
ಸುಪ್ರೀಂ ಕೋರ್ಟ್ ತಮ್ಮ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿರುವ ಮೂಖ್ಯ ಅಂಶವೆಂದರೆ, ಲೈಂಗಿಕ ಶಿಕ್ಷಣವನ್ನು 9ನೇ ತರಗತಿಯಿಂದ ಪ್ರಾರಂಭಿಸುವ ಪ್ರಸ್ತುತ ಪದ್ಧತಿ ಸರಿಯಲ್ಲ. ಬದಲಿಗೆ, ಮಕ್ಕಳು ಚಿಕ್ಕ ವಯಸ್ಸಿನಲ್ಲಿರುವಾಗಲೇ, ಅಂದರೆ ಪ್ರೌಢಾವಸ್ಥೆಗೆ ಕಾಲಿಡುವ ಮುನ್ನವೇ, ಈ ಶಿಕ್ಷಣವನ್ನು ಪಠ್ಯಕ್ರಮದ ಭಾಗವಾಗಿಸಬೇಕು. ಚಿಕ್ಕ ವಯಸ್ಸಿನಲ್ಲೇ ಈ ಶಿಕ್ಷಣವನ್ನು ನೀಡುವುದರ ಮೂಲಕ, ಪ್ರೌಢಾವಸ್ಥೆಯ ನಂತರ ಅವರ ದೇಹ ಮತ್ತು ಮನಸ್ಸಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಕ್ಕಳಿಗೆ ಸರಿಯಾದ ಮತ್ತು ವೈಜ್ಞಾನಿಕ ತಿಳುವಳಿಕೆ ನೀಡಬಹುದು. ಹಾರ್ಮೋನುಗಳ ಬದಲಾವಣೆಗಳು ಉಂಟುಮಾಡುವ ಪರಿಣಾಮಗಳು, ಅಗತ್ಯವಾದ ಮುನ್ನೆಚ್ಚರಿಕೆಗಳು ಮತ್ತು ಕಾಳಜಿ ವಹಿಸಬೇಕಾದ ವಿಚಾರಗಳ ಬಗ್ಗೆ ಅವರಿಗೆ ಪೂರ್ವಸಿದ್ಧತೆ ಇರುವುದರಿಂದ, ಅವರು ಈ ಹಂತವನ್ನು ಆರೋಗ್ಯಕರವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.
ಸುಪ್ರೀಂ ಕೋರ್ಟ್ ಈ ಮಹತ್ವದ ಅಭಿಪ್ರಾಯವನ್ನು ಭಾರತೀಯ ದಂಡ ಸಂಹಿತೆಯ (IPC) ಕಲಂ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಹಾಗೂ POCSO ಕಾಯ್ದೆಯ ಕಲಂ 6 (ತೀವ್ರ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಆರೋಪಿಯಾಗಿದ್ದ 15 ವರ್ಷದ ಬಾಲಾಪರಾಧಿ ಒಬ್ಬನಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನೀಡಿತು.ಆರೋಪಿಯನ್ನು ಅಪ್ರಾಪ್ತ ವಯಸ್ಕ ಎಂದು ಘೋಷಿಸಿದ ನ್ಯಾಯಾಲಯವು, ಬಾಲ ನ್ಯಾಯ ಮಂಡಳಿಯು ನಿಗದಿ ಪಡಿಸಿದ ಷರತ್ತುಗಳಿಗೆ ಒಳಪಟ್ಟು ಅಪರಾಧಿಯನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಿದೆ.