ನವದೆಹಲಿ,ನವೆಂಬರ್ 16: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅನುಭವಿಸಿದ ಭೀಕರ ಸೋಲಿನ ನಂತರ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದಲ್ಲಿ ಆಂತರಿಕ ಕಲಹ ಬಯಲಾಗಿದೆ. ಲಾಲು ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯಕ್ಕೆ ಮಾತ್ರವಲ್ಲದೆ ಕುಟುಂಬಕ್ಕೂ ವಿದಾಯ ಹೇಳಿ, ನನಗೆ ಕುಟುಂಬವೇ ಇಲ್ಲ, ತೇಜಸ್ವಿ ನನ್ನನ್ನು ಹೊರಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವೆಂಬರ್ 16 ರ ಬೆಳಗ್ಗೆ ಪಾಟ್ನಾದಲ್ಲಿರುವ ತಮ್ಮ ಹೆತ್ತವರ ಮನೆಯಿಂದ (ಲಾಲು-ರಬ್ರಿ ನಿವಾಸ) ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿಣಿ, ತಮ್ಮ ದುಃಖವನ್ನು ತೆರೆದಿಟ್ಟರು. ನನಗೆ ಕುಟುಂಬವಿಲ್ಲ. ನೀವು ಏನಾದರೂ ಕೇಳುವುದಿದ್ದರೆ ಈಗ ಸಂಜಯ್ ಯಾದವ್, ರಮೀಜ್ ಅಲಮ್ ಮತ್ತು ತೇಜಸ್ವಿ ಯಾದವ್ ಅವರನ್ನು ಕೇಳಿ ಎಂದು ತೀಕ್ಷ್ಣವಾಗಿ ಹೇಳಿದರು. ಇದು ಆರ್‌ಜೆಡಿ ಉಪಾಧ್ಯಕ್ಷ ತೇಜಸ್ವಿ ಯಾದವ್ ಅವರ ಸನ್ನಿಹಿತ ಸಹಾಯಕರಾದ ಸಂಜಯ್ ಯಾದವ್ (ರಾಜ್ಯಸಭಾ ಸದಸ್ಯ) ಮತ್ತು ರಮೀಜ್ ಅಲಮ್ ಅವರ ಮೇಲೆ ನೇರ ಆರೋಪವಾಗಿದೆ.
ಕುಟುಂಬದಲ್ಲಿ ಪ್ರಶ್ನೆಗಳನ್ನು ಎತ್ತುವ ಜನರನ್ನು ಹೊರಗೆಸೆಯಲಾಗುತ್ತದೆ, ಚಪ್ಪಲಿಯಿಂದ ಹೊಡೆಯಲಾಗುತ್ತದೆ. ಚುನಾವಣಾ ಸೋಲಿನ ಹೊಣೆಯನ್ನು ಹೊತ್ತುಕೊಳ್ಳಲು ಅವರು ತಯಾರಿಲ್ಲ. ನಾನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹೊರಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದ 243 ಸದಸ್ಯ ಬಲದ ವಿಧಾನಸಭೆಯಲ್ಲಿ ಆರ್‌ಜೆಡಿ ಕೇವಲ 25 ಸ್ಥಾನಗಳನ್ನು ಗೆದ್ದುಕೊಂಡಿದೆ. ಮಹಾಗಠಬಂಧನ್ ಮೈತ್ರಿಕೂಟ ಒಟ್ಟಾರೆ 35 ಸ್ಥಾನಗಳಿಗೆ ಸೀಮಿತವಾಗಿದೆ. ಇದರ ವಿರುದ್ಧ ಎನ್‌ಡಿಎ (ಜೆಡಿಯು-ಬಿಜೆಪಿ) 202 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲು ಆರ್‌ಜೆಡಿಯ ಭವಿಷ್ಯಕ್ಕೆ ಕುತ್ತುತರುವಂತಾಗಿದೆ.
ರೋಹಿಣಿ ಅವರ ಆಕ್ರೋಶಕ್ಕೆ ಮುಖ್ಯ ಕಾರಣ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು. ಹಿರಿಯ ಸಹೋದರ ತೇಜ್ ಪ್ರತಾಪ್ ಅವರನ್ನು ಹೊರಹಾಕಿದ್ದಕ್ಕೆ ರೋಹಿಣಿ ದೀರ್ಘಕಾಲದಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಚುನಾವಣೆಗೂ ಮುನ್ನ ಸೆಪ್ಟೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪಕ್ಷದ ನಾಯಕರು ಮತ್ತು ಕುಟುಂಬ ಸದಸ್ಯರನ್ನು ಅನ್‌ಫಾಲೋ ಮಾಡಿದ್ದರು. ಆದರೆ, ನವೆಂಬರ್ 9 ರಂದು ತೇಜಸ್ವಿಯ ಹುಟ್ಟುಹಬ್ಬದಂದು ಶುಭಾಶಯ ಕೋರಿ ಪಕ್ಷ ಬೆಂಬಲದ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.
2022 ರಲ್ಲಿ ರೋಹಿಣಿ ತಂದೆ ಲಾಲು ಯಾದವ್ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದರು. ಸಿಂಗಾಪುರ್‌ನಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯು ಕುಟುಂಬದ ಒಗ್ಗಟ್ಟಿನ ಸಂಕೇತವಾಗಿತ್ತು. ಆದರೆ, ಇತ್ತೀಚೆಗೆ ಈ ದಾನದ ಬಗ್ಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದೆ. ರೋಹಿಣಿ ಅವರನ್ನು ಕಿಡ್ನಿ ದಾನ ಮಾಡಿ ರಾಜಕೀಯಕ್ಕೆ ಬಂದವರು ಎಂದು ಟೀಕಿಗೆ ಒಳಗಾಗಿದ್ದರು.
ಜೆಡಿಯು ವಕ್ತಾ ನೀರಜ್ ಕುಮಾರ್, ಲಾಲು ಕುಟುಂಬದ ಕಲಹ ಎಲ್ಲರ ಮುಂದೆ ಬಂದಿದೆ. ಕಿಡ್ನಿ ದಾನ ಮಾಡಿದ ಪುತ್ರಿಯೇ ಕುಟುಂಬವನ್ನು ತ್ಯಜಿಸುತ್ತೇನೆ ಎಂದು ಹೇಳುವುದು ದುರದೃಷ್ಟಕರ ಎಂದು ಟೀಕಿಸಿದ್ದಾರೆ. ಆರ್‌ಜೆಡಿ ಸಂಸದ ಪಪ್ಪು ಯಾದವ್, ರೋಹಿಣಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲಿ” ಎಂದು ಮನವಿ ಮಾಡಿದ್ದಾರೆ. ಬಿಜೆಪಿ ನಾಯಕರು, ಒಂದು ವ್ಯಕ್ತಿಯಿಂದ ಕುಟುಂಬ ನಾಶವಾಗುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.





