ನವದೆಹಲಿ: “ಮತ ಕಳ್ಳತನಕ್ಕಿಂತ ದೊಡ್ಡ ರಾಷ್ಟ್ರವಿರೋಧಿ ಕೃತ್ಯ ಯಾವುದೂ ಇಲ್ಲ” ಎಂದು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಮಾತನಾಡಿ ಅವರು, ಚುನಾವಣಾ ಪ್ರಕ್ರಿಯೆಯನ್ನು “ವಶಪಡಿಸಿಕೊಳ್ಳುವ” ರಾಜಕೀಯ ಪ್ರಯತ್ನಗಳನ್ನು ಗಂಭೀರವಾಗಿ ಪ್ರಶ್ನಿಸಿದರು.
ಚುನಾವಣಾ ಆಯೋಗ, ಸಿಬಿಐ, ಇಡಿ ಮುಂತಾದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿ ಸಂಪೂರ್ಣ ಹಸ್ತಕಕ್ಷೇಪ ನಡೆಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ಹರಿಯಾಣದ ಪಟ್ಟಿ–ಬ್ರೆಜಿಲ್ ಮಹಿಳೆ”
ಹರಿಯಾಣದ ಮತದಾರರ ಪಟ್ಟಿಯಲ್ಲಿ ಬ್ರೆಜಿಲ್ ಮೂಲದ ಮಹಿಳೆಯ ಫೋಟೋ 22 ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದ ಘಟನೆ ಬಗ್ಗೆ ವಿವರಿಸಿದರು. ಮತ್ತೊಬ್ಬ ಮಹಿಳೆಯ ಹೆಸರು 200 ಬಾರಿ ದಾಖಲಾಗಿದ್ದು, ಇವು ‘ವೋಟ್ ಚೋರಿ’ಗೆ ಸ್ಪಷ್ಟ ಉದಾಹರಣೆಗಳೆಂದು ರಾಹುಲ್ ಗಾಂಧಿ ಹೇಳಿದರು.
“ಹರಿಯಾಣ ಚುನಾವಣೆಯನ್ನು ಕದ್ದಿದ್ದಾರೆ. ಚುನಾವಣಾ ಆಯೋಗ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಬಿಹಾರದಲ್ಲಿ ಎಸ್‌ಐಆರ್ ನಂತರ 1.2 ಲಕ್ಷ ನಕಲಿ ಮತದಾರರನ್ನು ಹೇಗೆ ಪತ್ತೆ ಮಾಡಲಾಯಿತು? ನೀವು ಸಂಸ್ಥೆಯನ್ನು ವಶಪಡಿಸಿಕೊಂಡಿದ್ದೀರಿ ಎಂಬುದು ಸ್ಪಷ್ಟ” ಎಂದು ರಾಹುಲ್ ಗಾಂಧಿ ಆರೋಪಗಳನ್ನು ಮುಂದಿಟ್ಟರು.
ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಡುವ ಸರ್ಕಾರದ ನಿರ್ಧಾರವನ್ನು ರಾಹುಲ್ ಗಾಂಧಿ ಕಠಿಣವಾಗಿ ಪ್ರಶ್ನಿಸಿದರು.
“ಆಯುಕ್ತರಿಗೆ ಕಾನೂನು ರಕ್ಷಣೆ ಯಾಕೆ?”
ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿರುವ ಹೊಸ ಕಾನೂನಿನ ಮೂಲಕ ಚುನಾವಣಾ ಆಯುಕ್ತರು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳಿಗೆ ಯಾವುದೇ ಕ್ರಮ ಕೈಗೊಳ್ಳಲು ಅಸಾಧ್ಯವಾಗುವಂತೆ ಕಾನೂನು ರಕ್ಷಣೆ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು. ನಾವು ಅಧಿಕಾರಕ್ಕೆ ಬಂದಾಗ ಇದೇ ಕಾನೂನನ್ನು ಬದಲಾಯಿಸುತ್ತೇವೆ. ನಿಮ್ಮ ತಪ್ಪುಗಳನ್ನು ಹುಡುಕುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದರು.
ಆರ್‌ಎಸ್‌ಎಸ್ ಪ್ರಭಾವದ ಆರೋಪ
ಚುನಾವಣಾ ಆಯೋಗ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳ ಮೇಲೆ RSS ಚಿಂತನೆಯವರನ್ನು ನೇಮಕ ಮಾಡಲಾಗುತ್ತಿದೆಯೆಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.
“ವಿಶ್ವವಿದ್ಯಾಲಯಗಳಲ್ಲಿ, ತನಿಖಾ ಸಂಸ್ಥೆಗಳಲ್ಲಿ, ಮತ್ತು ಈಗ ಚುನಾವಣಾ ಸಂಸ್ಥೆಯಲ್ಲೂ ಎಲ್ಲೆಡೆ ಒಂದು ಸಿದ್ಧಾಂತದವರನ್ನೇ ನೇಮಿಸಲಾಗಿದೆ. ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅಲ್ಲ, ಅತ್ಯಾದ್ಭುತ ಪ್ರಜಾಪ್ರಭುತ್ವ. ಮತ ಕಳವು ದೇಶದ್ರೋಹಿ ಚಟುವಟಿಕೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ನೀಡಿದ ‘ವೋಟ್ ಚೋರಿ’ ಪುರಾವೆಗಳು
ಕರ್ನಾಟಕ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ಅಕ್ರಮ, ಮತ್ತು ಕೋಆರ್ಡಿನೇಟೆಡ್ ವಂಚನೆಗಳ ಮಾಹಿತಿಯನ್ನು ರಾಹುಲ್ ಗಾಂಧಿ ಮಂಡಿಸಿದ್ದಾರೆ.
ಚುನಾವಣಾ ಸುಧಾರಣೆಗಳು ಸರಳ, ಪಾರದರ್ಶಕ ಮತ್ತು ಇಂದಿನ ತಂತ್ರಜ್ಞಾನದೊಂದಿಗೆ ಸುಲಭವಾಗಿ ಸಾಧ್ಯವಾಗುತ್ತವೆ ಎಂದು ರಾಹುಲ್ ತಿಳಿಸಿದರು. ಆದರೆ “ಸರ್ಕಾರಕ್ಕೆ ಸುಧಾರಣೆಗೆ ಮನಸ್ಸೇ ಇಲ್ಲ, ಅವರಿಗೆ ಕಬ್ಜ ಮಾಡಬೇಕಷ್ಟೇ” ಎಂದು ರಾಹುಲ್ ಗಾಂಧಿ ಹೇಳಿದರು.
