ಇನ್ಮುಂದೆ ಬದರಿನಾಥ್‌, ಕೇದಾರನಾಥ್‌ನಲ್ಲಿ ಅನ್ಯ ಧರ್ಮದವರಿಗೆ ಪ್ರವೇಶ ನಿಷೇಧ..!

Untitled design 2026 01 26T141759.936

ಉತ್ತರಾಖಾಂಡ್‌: ಉತ್ತರಾಖಂಡದ ಪವಿತ್ರ ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದ್ದು, ಶ್ರೀ ಗಂಗೋತ್ರಿ ದೇವಾಲಯ ಸಮಿತಿಯು ಭಾನುವಾರ ನಡೆದ ಮಹತ್ವದ ಸಭೆಯಲ್ಲಿ, ಇನ್ಮುಂದೆ ಹಿಂದೂಯೇತರರಿಗೆ ಗಂಗೋತ್ರಿ ಧಾಮಕ್ಕೆ ಪ್ರವೇಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ನಿರ್ಬಂಧವು ಕೇವಲ ಮುಖ್ಯ ದೇವಾಲಯಕ್ಕೆ ಮಾತ್ರ ಸೀಮಿತವಾಗಿರದೆ, ಶತಮಾನಗಳ ಇತಿಹಾಸವಿರುವ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಂದ ಹಿಡಿದು, ಗಂಗೆಯ ಚಳಿಗಾಲದ ವಾಸಸ್ಥಾನವಾದ ಮುಖ್ಬಾ ವರೆಗೂ ವಿಸ್ತರಿಸಲಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಶ್ರೀ ಗಂಗೋತ್ರಿ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್ ಸೆಮ್ವಾಲ್ ಈ ಕುರಿತು ಮಾತನಾಡಿ, ಧಾಮ ಮತ್ತು ಮುಖ್ಬಾಗೆ ಹಿಂದೂಯೇತರ ಪ್ರವೇಶದ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಇದು ನಮ್ಮ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯದ ರಕ್ಷಣೆಯ ಭಾಗವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಗಂಗೋತ್ರಿ ಸಮಿತಿಯ ಈ ಹೆಜ್ಜೆಯ ಬೆನ್ನಲ್ಲೇ, ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಕೂಡ ಇದೇ ಹಾದಿಯಲ್ಲಿ ಸಾಗಲು ಮುಂದಾಗಿದೆ. ಬಿಕೆಟಿಸಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಹೇಮಂತ್ ದ್ವಿವೇದಿ ಅವರು, ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧಿಸುವ ಪ್ರಸ್ತಾವನೆಯನ್ನು ಮುಂಬರುವ ಮಂಡಳಿ ಸಭೆಯಲ್ಲಿ ಮಂಡಿಸಲಾಗುವುದು ಎಂದು ಘೋಷಿಸಿದ್ದಾರೆ.

ಐತಿಹಾಸಿಕವಾಗಿ ಕೇದಾರನಾಥ ಮತ್ತು ಮಾನಾ ಪ್ರದೇಶಗಳಲ್ಲಿನ ದೇವಾಲಯಗಳಿಗೆ ಪ್ರವೇಶವು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಹಿಂದಿನ ಬಿಜೆಪಿಯೇತರ ಸರ್ಕಾರಗಳ ಅವಧಿಯಲ್ಲಿ ಈ ಸಂಪ್ರದಾಯಗಳನ್ನು ಕಡೆಗಣಿಸಲಾಗಿತ್ತು. ಈಗ ನಮ್ಮ ಧಾರ್ಮಿಕ ಗುರುತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸಲು ಸಂಪೂರ್ಣ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ದ್ವಿವೇದಿ ಒತ್ತಿ ಹೇಳಿದರು.

ರಾಜ್ಯದಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನೀಡಿದ ನಿರ್ದೇಶನಗಳನ್ನು ದ್ವಿವೇದಿ ಶ್ಲಾಘಿಸಿದರು. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ವದ ಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರ ಮತ್ತು ದೇವಾಲಯ ಸಮಿತಿಗಳ ನಡುವಿನ ಈ ಸಮನ್ವಯವು ಉತ್ತರಾಖಂಡದ ದೇವಸ್ಥಾನಗಳ ಪಾವಿತ್ರ್ಯತೆಯನ್ನು ದೀರ್ಘಕಾಲದವರೆಗೆ ಕಾಪಾಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಈ ಹೊಸ ನಿಯಮ ಜಾರಿಯಾದಲ್ಲಿ, ಪ್ರವಾಸಿಗರು ಮತ್ತು ಭಕ್ತರು ಕಟ್ಟುನಿಟ್ಟಾದ ಗುರುತಿನ ಚೀಟಿ ತಪಾಸಣೆಗೆ ಒಳಗಾಗಬೇಕಾಗಬಹುದು. ಉತ್ತರಾಖಂಡದ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಈ ನಿರ್ಧಾರವು ಹೊಸ ಸಂಚಲನ ಮೂಡಿಸಿದೆ.

Exit mobile version