ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದು ರಾಹುಲ್ ಗಾಂಧಿಗೆ ಮುತ್ತಿಟ್ಟ ವಿದ್ಯಾರ್ಥಿನಿ: ವಿಡಿಯೋ ವೈರಲ್

ಹೆಚ್ಚು (7)

ಪುಣೆ, ಆಗಸ್ಟ್ 24: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಸಂಸದ ರಾಹುಲ್ ಗಾಂಧಿ ಅವರು ಯುವಕರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ನಡೆದ ಅನಿರೀಕ್ಷಿತ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸೆಲ್ಫಿ ತೆಗೆದುಕೊಳ್ಳಲು ವೇದಿಕೆಗೆ ಬಂದ ವಿದ್ಯಾರ್ಥಿನಿಯೊಬ್ಬರು ರಾಹುಲ್ ಗಾಂಧಿ ಅವರ ಕೆನ್ನೆಗೆ ಮುತ್ತಿಟ್ಟಿದ್ದು, ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ‘ಛಾತ್ರೋಂ ಕೀ ಗೂಂಜ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಭಾಗವಹಿಸಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರ ಜೊತೆಗೆ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ರಾಹುಲ್ ಗಾಂಧಿ ಅವರ ಬಳಿ ಬಂದು ಸೆಲ್ಫಿ ತೆಗೆಸಿಕೊಳ್ಳುವ ವೇಳೆ ದಿಢೀರ್ ಅವರ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಅನಿರೀಕ್ಷಿತವಾಗಿ ನಡೆದ ಘಟನೆಯಿಂದ ರಾಹುಲ್ ಗಾಂಧಿ ಕೆಲ ಕ್ಷಣ ಅಚ್ಚರಿಗೊಂಡರು. ಬಳಿಕ ವಿದ್ಯಾರ್ಥಿನಿಯೊಂದಿಗೆ ಕೆಲಕಾಲ ಮಾತನಾಡಿದ ಅವರು, ನಂತರ ಭದ್ರತಾ ಸಿಬ್ಬಂದಿಯೊಂದಿಗೆ ವೇದಿಕೆಯಿಂದ ತೆರಳಿದರು.

ವಿದ್ಯಾರ್ಥಿನಿಯ ಹೇಳಿಕೆ

ಘಟನೆಯ ಬಳಿಕ 11ನೇ ತರಗತಿ ವಿದ್ಯಾರ್ಥಿನಿ ಮರಿಯಂ ಮಾತನಾಡಿದ್ದು, ರಾಹುಲ್ ಗಾಂಧಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾಳೆ.

ರಾಹುಲ್ ಗಾಂಧಿ ಅವರಂತೆ ಬೆಳೆದು, ಅವರ ಹೆಜ್ಜೆಗುರುತುಗಳನ್ನು ಅನುಸರಿಸುವುದು ತನ್ನ ಕನಸು ಎಂದು ಆಕೆ ಹೇಳಿದ್ದಾಳೆ. ಯುವಕರ ನಡುವೆ ರಾಹುಲ್ ಗಾಂಧಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ ಎಂದು ಆಕೆ ಅಭಿಪ್ರಾಯಪಟ್ಟಿದ್ದಾಳೆ.

ಈ ಹೇಳಿಕೆಯೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಂವಾದ, ಸೆಲ್ಫಿ ಕ್ಷಣಗಳು ಹಾಗೂ ವೇದಿಕೆಯಲ್ಲಿನ ವಾತಾವರಣದ ಹಲವು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರತಿಕ್ರಿಯೆ

ಘಟನೆಯ ವಿಡಿಯೋ ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಘಟನೆಯನ್ನು ರಾಜಕೀಯ ನಾಯಕರೊಂದಿಗೆ ಯುವಕರು ಹೊಂದಿರುವ ಮುಕ್ತ ಸಂವಹನದ ಉದಾಹರಣೆಯಾಗಿ ನೋಡಿದ್ದಾರೆ.

ಇನ್ನು ಕೆಲವರು ಘಟನೆಯನ್ನು ಹಾಸ್ಯಮಯವಾಗಿ ತೆಗೆದುಕೊಂಡು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಘಟನೆ ರಾಜಕೀಯ ಚರ್ಚೆಯೊಂದಿಗೆಯೂ ಬೆರೆತಿದೆ.

ಮನುಸ್ಮೃತಿ ಕುರಿತು ರಾಹುಲ್ ಗಾಂಧಿ ಹೇಳಿಕೆ

ಇದೇ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹಲವು ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಮಾತನಾಡಿದ್ದಾರೆ. ಮನುಸ್ಮೃತಿಯ ಸಿದ್ಧಾಂತವನ್ನು ಟೀಕಿಸಿದ ಅವರು, ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದ್ದಾರೆ.

Exit mobile version