ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಬೆಂಗಳೂರಿನ ಸಿನಿಪ್ರೇಮಿಗಳ ಪಾಲಿಗೆ ವಿಶೇಷ ನೆನಪುಗಳನ್ನು ಹೊತ್ತಿದ್ದ ನಗರದ ಐಕಾನಿಕ್ ‘ಊರ್ವಶಿ ಥಿಯೇಟರ್’ ಇದೀಗ ಇತಿಹಾಸದ ಪುಟ ಸೇರಿದೆ. ಲಾಲ್‌ಬಾಗ್ ಮುಖ್ಯರಸ್ತೆಯಲ್ಲಿದ್ದ ಈ ಚಿತ್ರಮಂದಿರವನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗಿದ್ದು, ಬರೋಬ್ಬರಿ 55 ವರ್ಷಗಳ ಕಾಲ ಸಾವಿರಾರು ಸಿನಿಮಾಗಳಿಗೆ ಸಾಕ್ಷಿಯಾಗಿದ್ದ ಥಿಯೇಟರ್ ಇನ್ನು ನೆನಪು ಮಾತ್ರ.
1970ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರಿಂದ ಉದ್ಘಾಟನೆಗೊಂಡಿದ್ದ ಊರ್ವಶಿ ಥಿಯೇಟರ್, ಐದು ದಶಕಗಳಿಗೂ ಹೆಚ್ಚು ಕಾಲ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳ ಪೈಕಿ ಒಂದಾಗಿ ಗುರುತಿಸಿಕೊಂಡಿತ್ತು. ಐದು ಭಾಷೆಗಳಲ್ಲಿ 5,000ಕ್ಕೂ ಹೆಚ್ಚು ಸಿನಿಮಾಗಳು ಇಲ್ಲಿ ಪ್ರದರ್ಶನ ಕಂಡಿವೆ ಎನ್ನಲಾಗಿದ್ದು, ನಗರದ ಹಲವು ತಲೆಮಾರುಗಳ ಸಿನಿಪ್ರೇಮಿಗಳೊಂದಿಗೆ ಈ ಚಿತ್ರಮಂದಿರ ಭಾವನಾತ್ಮಕ ನಂಟು ಹೊಂದಿತ್ತು.
ಊರ್ವಶಿ ಥಿಯೇಟರ್ ಕೇವಲ ಸಿನಿಮಾ ಪ್ರದರ್ಶನಕ್ಕೆ ಮಾತ್ರವಲ್ಲದೆ, ತನ್ನ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳಿಂದಲೂ ಖ್ಯಾತಿ ಪಡೆದಿತ್ತು. ಒಂದು ಕಾಲದಲ್ಲಿ ಭಾರತದಲ್ಲಿದ್ದ ಕೆಲವೇ ಏಕಪರದೆ ಚಿತ್ರಮಂದಿರಗಳಲ್ಲಿ ಲಭ್ಯವಿದ್ದ ಅತ್ಯಾಧುನಿಕ ಧ್ವನಿ ತಂತ್ರಜ್ಞಾನವನ್ನು ಊರ್ವಶಿ ಹೊಂದಿತ್ತು ಎಂದು ಹೇಳಲಾಗುತ್ತದೆ.
ನಂತರದ ವರ್ಷಗಳಲ್ಲಿ 4K ಪ್ರೊಜೆಕ್ಷನ್, 3D ಮತ್ತು ಮೆಯರ್ ಸೌಂಡ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪ್ರೇಕ್ಷಕರಿಗೆ ಉತ್ತಮ ಸಿನಿಮಾ ಅನುಭವ ನೀಡುತ್ತಿತ್ತು. ಶಿವರಾಜ್‌ಕುಮಾರ್ ಅಭಿನಯದ ‘AK 47’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳು ಇಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದವು. ಅನೇಕ ಸ್ಟಾರ್ ನಟರ ಸಿನಿಮಾಗಳಿಗೆ ಊರ್ವಶಿ ಪ್ರಮುಖ ತಾಣವಾಗಿತ್ತು.
ಆದರೆ ಕಳೆದ ಕೆಲವು ವರ್ಷಗಳಿಂದ ಚಿತ್ರಮಂದಿರದ ಗುತ್ತಿಗೆ ವಿಚಾರವಾಗಿ ವಿವಾದ ಮುಂದುವರಿದಿತ್ತು. ಚಿತ್ರಮಂದಿರವನ್ನು ಗುತ್ತಿಗೆಗೆ ಪಡೆದಿದ್ದ ಬಸಟ್ಟಿ ಶೆಟ್ಟಿ ಅವರ ಲೀಸ್ ಅವಧಿ 2018ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು. ಬಳಿಕ ಗುತ್ತಿಗೆ ಮುಂದುವರಿದಿದೆಯೇ ಅಥವಾ ಇಲ್ಲವೇ ಎಂಬ ವಿಚಾರದಲ್ಲಿ ಕಾನೂನು ವಿವಾದ ಉಂಟಾಗಿತ್ತು. ಈ ಸಂಬಂಧ ಹಲವು ವರ್ಷಗಳ ಕಾಲ ನ್ಯಾಯಾಂಗ ಹೋರಾಟ ನಡೆದಿತ್ತು.
ಇದೀಗ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಭೂಮಾಲೀಕರು ಪೊಲೀಸರ ಸಮ್ಮುಖದಲ್ಲಿ ಜಾಗವನ್ನು ವಾಪಸ್ ಪಡೆದಿದ್ದಾರೆ. ಇದರ ಬೆನ್ನಲ್ಲೇ ಚಿತ್ರಮಂದಿರವನ್ನು ತೆರವುಗೊಳಿಸುವ ಹಾಗೂ ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ. ಬೆಳಗ್ಗೆಯೇ ಜೆಸಿಬಿ ಮೂಲಕ ಊರ್ವಶಿ ಥಿಯೇಟರ್‌ನ ಕಟ್ಟಡವನ್ನು ಕೆಡವಲಾಗಿದ್ದು, ಸ್ಥಳೀಯರು ಹಾಗೂ ಸಿನಿಪ್ರೇಮಿಗಳು ಭಾವುಕರಾಗಿದ್ದಾರೆ.
ಊರ್ವಶಿ ಥಿಯೇಟರ್ ನೆಲಸಮವಾಗುತ್ತಿರುವುದು ಮತ್ತೊಂದು ಕಾರಣಕ್ಕೂ ಚರ್ಚೆಗೆ ಗ್ರಾಸವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಪ್ರದರ್ಶನಕ್ಕಾಗಿ ಈ ಚಿತ್ರಮಂದಿರವನ್ನು ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಹಲವು ಅಭಿಮಾನಿಗಳಿದ್ದರು. ಇತ್ತೀಚಿನವರೆಗೂ ಚಿತ್ರಮಂದಿರದ ಶೋ ಹಾಗೂ ಟಿಕೆಟ್ ಮಾಹಿತಿಗಳು ಲಭ್ಯವಿದ್ದ ಹಿನ್ನೆಲೆಯಲ್ಲಿ, ಇದೀಗ ಥಿಯೇಟರ್ ಇಲ್ಲದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಆಫ್‌ಲೈನ್ ಟಿಕೆಟ್ ಖರೀದಿಗಾಗಿ ಊರ್ವಶಿ ಥಿಯೇಟರ್‌ಗೆ ಆಗಮಿಸಿದ್ದ ಕೆಲ ಅಭಿಮಾನಿಗಳಿಗೂ ಈ ಬೆಳವಣಿಗೆ ಆಘಾತ ತಂದಿದೆ.
