ಜಾಗತಿಕ ಭಯೋತ್ಪಾದಕ ಹಣಕಾಸು ಕಾವಲು ಸಂಸ್ಥೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಮತ್ತು ಪೇಪಾಲ್ ಅನ್ನು ಭಯೋತ್ಪಾದಕರು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. 2019ರ ಪುಲ್ವಾಮಾ ದಾಳಿ ಮತ್ತು 2022ರ ಗೋರಖ್‌ನಾಥ ದೇವಾಲಯ ದಾಳಿಯ ಸಂದರ್ಭದಲ್ಲಿ ಈ ಆನ್‌ಲೈನ್ ವೇದಿಕೆಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ತಿಳಿದುಬಂದಿದೆ.
2019ರಲ್ಲಿ ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಬಳಸಲಾದ ಸುಧಾರಿತ ಸ್ಫೋಟಕ ಸಾಧನ (IED)ದ ಪ್ರಮುಖ ರಾಸಾಯನಿಕವಾದ ಅಲ್ಯೂಮಿನಿಯಂ ಪುಡಿಯನ್ನು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಮೂಲಕ ಖರೀದಿಸಲಾಗಿತ್ತು ಎಂದು ಎಫ್‌ಎಟಿಎಫ್ ವರದಿ ಬಹಿರಂಗಪಡಿಸಿದೆ. ಈ ರಾಸಾಯನಿಕವು ಸ್ಫೋಟದ ಪರಿಣಾಮವನ್ನು ಹೆಚ್ಚಿಸಲು ಬಳಸಲಾಗಿತ್ತು. ತನಿಖೆಯು ಗಡಿಯಾಚೆಗಿನ ಸ್ಫೋಟಕಗಳ ಸಾಗಣೆಯನ್ನು ಸಹ ಬೆಳಕಿಗೆ ತಂದಿದೆ, ಇದು ಭಯೋತ್ಪಾದಕರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ತಮ್ಮ ಕಾರ್ಯಾಚರಣೆಗೆ ದುರುಪಯೋಗಪಡಿಸಿಕೊಳ್ಳುವ ಆತಂಕಕಾರಿ ಪ್ರವೃತ್ತಿಯನ್ನು ತೋರಿಸುತ್ತದೆ.
ಗೋರಖ್‌ನಾಥ ದೇವಾಲಯ ದಾಳಿಯಲ್ಲಿ ಪೇಪಾಲ್ ದುರುಪಯೋಗ
2022ರ ಏಪ್ರಿಲ್ 3ರಂದು ಉತ್ತರ ಪ್ರದೇಶದ ಗೋರಖ್‌ನಾಥ ದೇವಾಲಯದ ಭದ್ರತಾ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಆರೋಪಿಯು ಪೇಪಾಲ್ ಮೂಲಕ ಇಸ್ಲಾಮಿಕ್ ಸ್ಟೇಟ್‌ಗೆ ಹಣ ವರ್ಗಾಯಿಸಿದ್ದ ಎಂದು ಎಫ್‌ಎಟಿಎಫ್ ವರದಿ ತಿಳಿಸಿದೆ. ಆರೋಪಿಯು ತನ್ನ ಗುರುತನ್ನು ಮರೆಮಾಚಲು ವರ್ಚುವಲ್ ಖಾಸಗಿ ನೆಟ್‌ವರ್ಕ್ (ವಿಪಿಎನ್) ಬಳಸಿದ್ದಾನೆ ಮತ್ತು ಮೂರನೇ ವ್ಯಕ್ತಿಯ ವಹಿವಾಟುಗಳ ಮೂಲಕ 44 ಪಾವತಿಗಳನ್ನು ಮಾಡಿದ್ದಾನೆ. ಈ ಘಟನೆಯು ಆನ್‌ಲೈನ್ ಪಾವತಿ ವೇದಿಕೆಗಳ ದುರ್ಬಳಕೆಯ ಗಂಭೀರತೆಯನ್ನು ಒತ್ತಿಹೇಳಿದೆ.
ಎಫ್‌ಎಟಿಎಫ್ ತನ್ನ ವರದಿಯಲ್ಲಿ ಭಯೋತ್ಪಾದಕರು ಆನ್‌ಲೈನ್ ಶಾಪಿಂಗ್ ಮತ್ತು ಪಾವತಿ ಸೇವೆಗಳ ದುರುಪಯೋಗದ ಹೆಚ್ಚುತ್ತಿರುವ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಉಗ್ರರು ಉಪಕರಣಗಳು, ಶಸ್ತ್ರಾಸ ಗಳು, ರಾಸಾಯನಿಕಗಳು ಮತ್ತು 3D ಮುದ್ರಣ ಸಾಮಗ್ರಿಗಳನ್ನು ಖರೀದಿಸಲು ಈ ವೇದಿಕೆಗಳನ್ನು ಬಳಸುತ್ತಿದ್ದಾರೆ. ಇಂತಹ ದುರುಪಯೋಗವನ್ನು ತಡೆಗಟ್ಟಲು ರಾಷ್ಟ್ರಗಳು ಮತ್ತು ಡಿಜಿಟಲ್ ಸೇವಾ ಪೂರೈಕೆದಾರರು ಕಟ್ಟುನಿಟ್ಟಾದ ತಪಾಸಣೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಫ್‌ಎಟಿಎಫ್ ಒತ್ತಾಯಿಸಿದೆ.