ನವದೆಹಲಿ: 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೇತಾಪೋರಾ ಪ್ರದೇಶದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿ ಭಾರತವನ್ನು ದುಃಖದ ಸಾಗರದಲ್ಲಿ ಮುಳುಗಿಸಿತು. ಈ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಯ 40 ಯೋಧರು ಹುತಾತ್ಮರಾದರು. ಏಳು ವರ್ಷಗಳು ಕಳೆದರೂ ಆ ದಿನದ ಕಹಿ ನೆನಪು ಭಾರತೀಯರ ಮನಸ್ಸಿನಲ್ಲಿ ಇನ್ನೂ ಹಚ್ಚಹಳಿಯದೇ ಉಳಿದಿದೆ.
ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ಯೋಧರ ಕಾಫಿಲಾ ಮೇಲೆ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿ ಆತ್ಮಾಹುತಿ ದಾಳಿ ನಡೆಸಲಾಯಿತು. ಕ್ಷಣಾರ್ಧದಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಹಲವು ವಾಹನಗಳು ಚೂರ್ ಚೂರಾಗಿ, ಅನೇಕ ಯೋಧರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. 1989ರ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಗಿದೆ.
ಈ ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಹೊತ್ತುಕೊಂಡಿತು. ಆತ್ಮಾಹುತಿ ದಾಳಿ ನಡೆಸಿದ ವ್ಯಕ್ತಿ ಕಾಕಪೋರಾ ನಿವಾಸಿ ಆದಿಲ್ ಅಹಮದ್ ದಾರ್ ಎಂದು ಗುರುತಿಸಲಾಯಿತು. ದಾಳಿಯ ನಂತರ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, #BlackDay ಎಂಬ ಹ್ಯಾಶ್‌ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನರು ವೀರ ಯೋಧರ ಬಲಿದಾನವನ್ನು ಸ್ಮರಿಸಿದರು.
ಈ ಘಟನೆ ಭಾರತಕ್ಕೆ ಭದ್ರತಾ ದೃಷ್ಟಿಯಿಂದ ದೊಡ್ಡ ಸವಾಲಾಗಿ ಪರಿಣಮಿಸಿತು. ಕೇಂದ್ರ ಸರ್ಕಾರ ಉಗ್ರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿತು. ಸಿಆರ್‌ಪಿಎಫ್ ಮತ್ತು 55 ರಾಷ್ಟ್ರೀಯ ರೈಫಲ್ಸ್ ಸಂಯುಕ್ತವಾಗಿ ಕಾರ್ಯಾಚರಣೆ ಆರಂಭಿಸಿ, ದಾಳಿಗೆ ಸಂಬಂಧಿಸಿದವರನ್ನು ಪತ್ತೆಹಚ್ಚಲು ವಿಶೇಷ ಕಾರ್ಯತಂತ್ರ ರೂಪಿಸಿತು. ಫೆಬ್ರವರಿ 18ರಂದು ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾದರೂ, ಪ್ರಮುಖ ಸಂಚುಕೋರರನ್ನು ಹೊಡೆದುರುಳಿಸಲಾಯಿತು.
ದಾಳಿಗೆ ಪ್ರತಿಯಾಗಿ 2019ರ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಮಹತ್ವದ ಕ್ರಮ ಕೈಗೊಂಡಿತು. 12 ಮಿರಾಜ್–2000 ಯುದ್ಧ ವಿಮಾನಗಳು ನಿಯಂತ್ರಣ ರೇಖೆ ದಾಟಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಪ್ರದೇಶದಲ್ಲಿದ್ದ ಉಗ್ರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದವು.
ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ವಾಯುಪಡೆಯ ವಿಮಾನಗಳು ಭಾರತೀಯ ಗಡಿಗೆ ನುಗ್ಗಲು ಪ್ರಯತ್ನಿಸಿತು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವೀರ ಪೈಲಟ್ ಅಭಿನಂದನ್ ವರ್ಧಮಾನ್ ಮಿಗ್–21 ವಿಮಾನದಲ್ಲಿ ಹಾರಾಟ ನಡೆಸುವ ವೇಳೆ ಪಾಕಿಸ್ತಾನ ಭೂಭಾಗದಲ್ಲಿ ಬಂಧಿತರಾದರು. ಅಂತಾರಾಷ್ಟ್ರೀಯ ಒತ್ತಡದ ಹಿನ್ನೆಲೆ ಪಾಕಿಸ್ತಾನ ಸರ್ಕಾರ ಅವರನ್ನು ಬಿಡುಗಡೆ ಮಾಡಬೇಕಾಯಿತು. ಅವರ ವಾಪಸಾತಿ ದೇಶದಾದ್ಯಂತ ಹೆಮ್ಮೆಯ ಕ್ಷಣವಾಯಿತು.
ಪುಲ್ವಾಮಾ ದಾಳಿಯ ನಂತರ ತನಿಖೆಗಳು ತೀವ್ರಗೊಂಡವು. National Investigation Agency (ಎನ್‌ಐಎ) 2020ರ ಆಗಸ್ಟ್‌ನಲ್ಲಿ ತನ್ನ ಸವಿಸ್ತಾರ ವರದಿಯನ್ನು ಸಲ್ಲಿಸಿ, ದಾಳಿಗೆ ಸಂಬಂಧಿಸಿದ ಹಲವಾರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿತು. 2021ರಲ್ಲಿ ಭದ್ರತಾ ಪಡೆಗಳು ಇನ್ನೂ ಕೆಲವು ಉಗ್ರರನ್ನು ಹೊಡೆದುರುಳಿಸಿ, ಪ್ರಕರಣದ ತನಿಖೆಯನ್ನು ಮುಂದುವರಿಸಿತು.
ಪುಲ್ವಾಮಾ ದಾಳಿ ಕೇವಲ ಒಂದು ಉಗ್ರ ಕೃತ್ಯವಷ್ಟೇ ಅಲ್ಲ, ಅದು ದೇಶದ ಏಕತೆ ಮತ್ತು ಸೈನಿಕರ ತ್ಯಾಗದ ಮಹತ್ವವನ್ನು ಮತ್ತೆ ಸ್ಮರಿಸಿದ ಘಟನೆ. ಪ್ರತಿ ವರ್ಷ ಫೆಬ್ರವರಿ 14ರಂದು ದೇಶಾದ್ಯಂತ ವೀರ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ. ಶಾಲೆಗಳು, ಕಚೇರಿಗಳು ಮತ್ತು ಸೈನಿಕ ಸ್ಮಾರಕಗಳಲ್ಲಿ ಮೌನಾಚರಣೆ ನಡೆಸಿ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರುತ್ತಾರೆ.
ಏಳು ವರ್ಷಗಳಾದರೂ ಪುಲ್ವಾಮಾ ದಾಳಿ ಭಾರತೀಯರ ಮನಸ್ಸಿನಲ್ಲಿ ಮರೆಯಲಾಗದ ಕರಾಳ ಅಧ್ಯಾಯವಾಗಿ ಉಳಿದಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 40 ಸಿಆರ್‌ಪಿಎಫ್ ಯೋಧರ ಬಲಿದಾನವನ್ನು ಭಾರತ ಸದಾ ಕೃತಜ್ಞತೆಯಿಂದ ಸ್ಮರಿಸುತ್ತದೆ. ಅವರ ತ್ಯಾಗ ದೇಶದ ಭದ್ರತೆಗಾಗಿ ಹೋರಾಡುವ ಪ್ರತಿಯೊಬ್ಬ ಯೋಧನಿಗೂ ಪ್ರೇರಣೆಯಾಗಿಯೇ ಉಳಿಯಲಿದೆ.
