ಆದಿವಾಸಿ ಸಮಾವೇಶಕ್ಕೆ ಅನುಮತಿ ವಿಳಂಬ: ಮಮತಾ ಬ್ಯಾನರ್ಜಿ ವಿರುದ್ಧ ರಾಷ್ಟ್ರಪತಿ ಮುರ್ಮು ಕಿಡಿ

Untitled design 2026 03 07T222412.426

ಕೋಲ್ಕತ್ತಾ: ಅಂತಾರಾಷ್ಟ್ರೀಯ ಆದಿವಾಸಿ ಸಮಾವೇಶಕ್ಕೆ ಅನುಮತಿ ನೀಡುವಲ್ಲಿ ವಿಳಂಬ, ಸ್ಥಳ ಬದಲಾವಣೆ ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಲಿಗುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಂತಾರಾಷ್ಟ್ರೀಯ ಆದಿವಾಸಿ ಸಮಾವೇಶಕ್ಕೆ ಸಂಬಂಧಿಸಿದ ಅನುಮತಿ ಪ್ರಕ್ರಿಯೆ ವಿಳಂಬವಾದುದು, ಸ್ಥಳ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಉಂಟಾದುದು ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದ ವೇದಿಕೆಯಿಂದಲೇ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ಈ ಸಮಾವೇಶವನ್ನು ಬಿದಾನಗರದಲ್ಲಿ ಆಯೋಜಿಸುವ ಯೋಜನೆ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರದಿಂದ ಸಮಯಕ್ಕೆ ಅನುಮತಿ ಸಿಗದ ಕಾರಣ, ಕೊನೆಕ್ಷಣದಲ್ಲಿ ಕಾರ್ಯಕ್ರಮದ ಸ್ಥಳವನ್ನು ಬಾಗ್ದೋಗ್ರಾ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಗೋಸೈನ್ಪುರಕ್ಕೆ ಬದಲಾಯಿಸಬೇಕಾಯಿತು. ಈ ಬೆಳವಣಿಗೆ ಬಗ್ಗೆ ಮಾತನಾಡಿದ ರಾಷ್ಟ್ರಪತಿ ಮುರ್ಮು, “ಮಮತಾ ದೀದಿ, ನೀವು ನನ್ನ ಸಹೋದರಿ ಇದ್ದಂತೆ. ನಾನು ಕೂಡ ಬಂಗಾಳದ ಮಗಳು. ಹಾಗಿದ್ದಾಗ ಇಲ್ಲಿಗೆ ಬರಲು ನನಗೇಕೆ ಅವಕಾಶ ನೀಡುತ್ತಿಲ್ಲ?” ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಈ ವಿಚಾರಕ್ಕೆ ರಾಜಕೀಯ ಬಣ್ಣ ಕೂಡ ಪಡೆದುಕೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, “ಬಿಜೆಪಿ ಹೇಳಿದಂತೆ ರಾಜಕೀಯ ಮಾಡಬೇಡಿ. ಬಿಜೆಪಿ ಆಡಳಿತವಿರುವ ರಾಜ್ಯಗಳ ಸ್ಥಿತಿಯನ್ನು ಮೊದಲು ನೋಡಿ,” ಎಂದು ಹೇಳಿದ್ದಾರೆ. ಬುಡಕಟ್ಟು ಜನಾಂಗದವರ ಮೇಲೆ ನಡೆಯುವ ದೌರ್ಜನ್ಯಗಳ ವಿಚಾರದಲ್ಲಿ ಬಿಜೆಪಿ ಸರ್ಕಾರಗಳು ಎಲ್ಲಿ ಹೋಗಿದ್ದವು ಎಂದು ಕೂಡ ಅವರು ಪ್ರಶ್ನಿಸಿದ್ದಾರೆ.

ಮಮತಾ ಬ್ಯಾನರ್ಜಿ ನೀಡಿದ ಈ ಹೇಳಿಕೆ ಬಳಿಕ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ನೀಡಿದ ಅವಮಾನ ಇದು ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ನಡೆ ಸರಿಯಲ್ಲ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಈ ನಡುವೆ, ಅಂತಾರಾಷ್ಟ್ರೀಯ ಆದಿವಾಸಿ ಸಮಾವೇಶವು ಕೊನೆಗೆ ಬಾಗ್ದೋಗ್ರಾ ಸಮೀಪದ ಗೋಸೈನ್ಪುರದಲ್ಲಿ ನಡೆಯುವಂತೆ ವ್ಯವಸ್ಥೆ ಮಾಡಲಾಯಿತು.

Exit mobile version