ಚಾಮರಾಜನಗರ, ಆಗಸ್ಟ್ 16: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳ ಗುಂಡೇಟಿಗೆ ಬಲಿಯಾಗಿದ್ದು, ಈ ದುರಂತ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ್ದಾರೆ. ಕೊಳ್ಳೆಗಾಲದ (ಹನೂರು ತಾಲೂಕು) ಸಹಾಯಕ ಆಯುಕ್ತ ದಿನೇಶ್ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, 7 ದಿನಗಳ ಒಳಗಡೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ‘
ಘಟನೆಯ ಸಂಪೂರ್ಣ ವಿವರ
ಆಗಸ್ಟ್ 14 ರಂದು ಶಾಗ್ಯ ಅರಣ್ಯ ವ್ಯಾಪ್ತಿಯಲ್ಲಿ ಹಸುಗಳು ಕಾಡಿಗೆ ಮೇಯಲು ಹೋಗಿದ್ದು, ಅವು ವಾಪಸ್ ಬಂದಿರಲಿಲ್ಲ. ಹೀಗಾಗಿ ಸ್ಥಳೀಯ ನಿವಾಸಿಗಳಾದ ಅಂತೋಣಿ ಸ್ವಾಮಿ, ಅವರ ಸಹೋದರ ಕುಮಾರ್, ಮೈದುನ ಪೀಟರ್ ಮತ್ತು ಸಂಬಂಧಿ ಜೋಸೆಫ್ ಅವರು ಹಸುಗಳನ್ನು ಹುಡುಕಲು ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಮಾರಿಯಮಂಗಲ ಗ್ರಾಮದಿಂದ ಸುಮಾರು 4 ಕಿ.ಮೀ. ದೂರದ ಅರಣ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ, ಅರಣ್ಯ ಇಲಾಖೆ ಅಧಿಕಾರಿಗಳು ಇವರನ್ನು ಪ್ರಾಣಿ ಬೇಟೆಗಾರರೆಂದು ಭಾವಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಘಟನೆಯಿಂದ ತಪ್ಪಿಸಿಕೊಂಡು ಬಂದ ಜೋಸೆಫ್ ತಿಳಿಸಿದ್ದಾರೆ.
ಮೃತರು ಮತ್ತು ಬದುಕುಳಿದವರು
ಮೃತಪಟ್ಟವರನ್ನು ಅಂತೋಣಿ ಸ್ವಾಮಿ (ವಯಸ್ಸು 35), ಕುಮಾರ್ (ವಯಸ್ಸು 30) – ಅಂತೋಣಿ ಸ್ವಾಮಿ ಅವರ ಸಹೋದರ, ಪೀಟರ್ (ವಯಸ್ಸು 32) – ಅಂತೋಣಿ ಸ್ವಾಮಿ ಅವರ ಮೈದುನ ಎಂದು ಗುರುತಿಸಲಾಗಿದೆ. ಜೋಸೆಫ್ ಅವರು ಅದೃಷ್ಟವಶಾತ್ ತಪ್ಪಿಸಿಕೊಂಡು ಬಂದಿದ್ದು, ಅವರು ಕುಟುಂಬಕ್ಕೆ ಮತ್ತು ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾರೆ. ಮೃತ ಅಂತೋಣಿ ಸ್ವಾಮಿ ಅವರ ಪತ್ನಿ ಲೂರ್ದಾಮೇರಿ ಅವರು ನೀಡಿದ ದೂರಿನ ಆಧಾರದಲ್ಲಿ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಲೂರ್ದಾಮೇರಿ ದೂರಿನಲ್ಲಿ ಏನಿದೆ?
ಲೂರ್ದಾಮೇರಿ ಅವರು ತಮ್ಮ ದೂರಿನಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ತಿಳಿಸಿದ್ದಾರೆ.
-
“ನಾವು ಹಸುಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೆವು. ಆ.14 ರಂದು ಹಸುಗಳು ಕಾಡಿಗೆ ಮೇಯಲು ಹೋಗಿದ್ದವು ಮತ್ತು ಹಿಂತಿರುಗಿರಲಿಲ್ಲ.”
-
“ಹಸುಗಳನ್ನು ಹುಡುಕಲು ಆ.14ರ ಸಂಜೆ ನನ್ನ ಪತಿ ಅಂತೋಣಿ ಸ್ವಾಮಿ, ಅವರ ಸಹೋದರ ಕುಮಾರ್, ಮೈದುನ ಪೀಟರ್ ಮತ್ತು ಸಂಬಂಧಿ ಜೋಸೆಫ್ ಅರಣ್ಯಕ್ಕೆ ತೆರಳಿದರು.”
-
“ಬೆಳಿಗ್ಗೆಯಾದರೂ ಅವರು ಮನೆಗೆ ಬಂದಿರಲಿಲ್ಲ. ನಂತರ ಜೋಸೆಫ್ ಕರೆ ಮಾಡಿ ದುರಂತ ವಿಚಾರ ತಿಳಿಸಿದರು.”
-
“ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟರು. ಜೋಸೆಫ್ ಮಾತ್ರ ತಪ್ಪಿಸಿಕೊಂಡು ಬಂದರು.”
ಮ್ಯಾಜಿಸ್ಟ್ರೇಟ್ ತನಿಖೆ ಏಕೆ?
ಈ ಪ್ರಕರಣದ ಸಂಕೀರ್ಣತೆ ಮತ್ತು ಅರಣ್ಯ ಸಿಬ್ಬಂದಿಗಳ ಪಾತ್ರದ ಕುರಿತು ವಿವಾದಗಳಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಸಹಾಯಕ ಆಯುಕ್ತ ದಿನೇಶ್ ಕುಮಾರ್ ಅವರು ತನಿಖೆಯನ್ನು ನಡೆಸಲಿದ್ದು, ಘಟನೆಯ ಎಲ್ಲಾ ಅಂಶಗಳನ್ನು ವಿವರವಾಗಿ ಪರಿಶೀಲಿಸಿ 7 ದಿನಗಳಲ್ಲಿ ವರದಿ ಸಲ್ಲಿಸಬೇಕು.
“ಘಟನೆಯ ಸ್ವರೂಪವನ್ನು ಪರಿಗಣಿಸಿ, ನ್ಯಾಯಸಮ್ಮತ ತನಿಖೆಯ ಅಗತ್ಯವಿದೆ. ಮ್ಯಾಜಿಸ್ಟ್ರೇಟ್ ತನಿಖೆಯು ಘಟನೆಯಲ್ಲಿ ನಿಜವಾಗಿಯೂ ಏನಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಸಹಕಾರಿಯಾಗಿದೆ” ಎಂದು ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.
ಪೊಲೀಸ್ ಪ್ರಕರಣದ ವಿವರ
ಹನೂರು ಪೊಲೀಸ್ ಠಾಣೆಯಲ್ಲಿ ದಕ್ಷಿಣ ವಲಯ ಐಜಿ ಬೋರಲಿಂಗೇಗೌಡ ಮತ್ತು ಚಾಮರಾಜನಗರ ಎಸ್ಪಿ ಮುತ್ತುತಾಜು ಅವರ ಸಮ್ಮುಖದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನಾಗಿ ‘ಹನೂರು ಅರಣ್ಯ ವಿಭಾಗದ ಅಧಿಕಾರಿಗಳು’ ಎಂದು ಉಲ್ಲೇಖಿಸಲಾಗಿದ್ದು, ನಿರ್ದಿಷ್ಟ ಹೆಸರುಗಳನ್ನು ನಮೂದಿಸಲಾಗಿಲ್ಲ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ (ಕೊಲೆ ಪ್ರಕರಣ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
