ನವದೆಹಲಿ, ಅಕ್ಟೋಬರ್ 26: ಮಲೇಷ್ಯಾದ ರಾಜಧಾನಿ ಕೌಲಾಲಂಪುರ್‌ನಲ್ಲಿ ನಡೆಯುತ್ತಿರುವ 47ನೇ ಆಸಿಯಾನ್ ಶೃಂಗಸಭೆಯನ್ನು (47th ASEAN Summit) ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಸಮಿಟ್ ಆಯೋಜಿಸಿದ್ದಕ್ಕೆ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಆತ್ಮೀಯವಾಗಿ ಅಭಿನಂದಿಸಿದ ಪ್ರಧಾನಿ ಮೋದಿ, ಭಾರತ ಮತ್ತು ಆಸಿಯಾನ್ ಸಂಘಟನೆಯ ನಡುವಿನ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಈ ಒಡಂಬಡಿಕೆಯು ಕೇವಲ ಭೌಗೋಳಿಕ ಸಾಮೀಪ್ಯಕ್ಕೆ ಸೀಮಿತವಲ್ಲ, ಬದಲಿಗೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಮೌಲ್ಯಾಧಾರಿತ ಬಲವಾದ ಸಂಬಂಧವನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.
ಭಾರತ ಮತ್ತು ಆಸಿಯಾನ್ ದೇಶಗಳ ಒಟ್ಟು ಜನಸಂಖ್ಯೆ ವಿಶ್ವದ ಕಾಲುಭಾಗಕ್ಕಿಂತ ಹೆಚ್ಚು. ನಾವು ಭೌಗೋಳಿಕವಾಗಿ ಮಾತ್ರ ಹತ್ತಿರವಿಲ್ಲ, ಐತಿಹಾಸಿಕ ಸಂಪರ್ಕ, ಸಾಮಾನ್ಯ ಮೌಲ್ಯಗಳು ಮತ್ತು ಅಭಿವೃದ್ಧಿಶೀಲ ಜಗತ್ತಿನಲ್ಲಿ ಸಹವರ್ತಿತ್ವದ ಆಶಯಗಳು ನಮ್ಮನ್ನು ಒಟ್ಟುಗೂಡಿಸಿವೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. .
ಈ 21ನೇ ಶತಮಾನವು ನಮ್ಮ ಶತಮಾನವಾಗಿದೆ. ಇದು ಭಾರತ ಮತ್ತು ಆಸಿಯಾನ್‌ನ ಶತಮಾನವಾಗಿದೆ ಎಂದು ಘೋಷಿಸಿದ ಪ್ರಧಾನಿ ಮೋದಿ, ಆಸಿಯಾನ್ ಸಮುದಾಯದ ‘ವಿಷನ್ 2045’ ಮತ್ತು ಭಾರತದ ‘ವಿಕಸಿತ ಭಾರತ್ 2047’ ಯೋಜನೆಗಳು ಒಟ್ಟಾರೆಯಾಗಿ ಮಾನವಕುಲದ ಒಳಿತಿಗೆ ಪೂರಕವಾಗಿರುವುದನ್ನು ಎತ್ತಿ ತೋರಿಸಿದರು. ಈ ಎರಡೂ ದೀರ್ಘಕಾಲೀನ ಯೋಜನೆಗಳು ಸುಸ್ಥಿರ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಮತ್ತು ಸಾಮಾಜಿಕ ನ್ಯಾಯದ ಮೇಲೆ ಕೇಂದ್ರೀಕೃತವಾಗಿವೆ.
ಪ್ರತಿಯೊಂದು ಬಿಕ್ಕಟ್ಟಿನ ಸಮಯದಲ್ಲೂ ಭಾರತವು ಆಸಿಯಾನ್ ಮತ್ತು ಅದರ ಮೈತ್ರಿದೇಶಗಳ ಜೊತೆಗೆ ದೃಢವಾಗಿ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೋವಿಡ್-19 ಸಾಂಕ್ರಾಮಿಕದಿಂದ ಹಿಡಿದು ಪ್ರಕೃತಿ ವಿಕೋಪಗಳವರೆಗೆ, ಭಾರತವು ಔಷಧ, ಆಹಾರ, ತಾಂತ್ರಿಕ ಸಹಾಯ ಮತ್ತು ತರಬೇತಿ ನೀಡುವ ಮೂಲಕ ಸಹಾಯ ಮಾಡಿದೆ. ಸಾಗರ ಆರ್ಥಿಕತೆ, ಸಾಗರ ಭದ್ರತೆ, ಸಂಪರ್ಕ ಸಾಧನಗಳು ಮತ್ತು ಪರಸ್ಪರ ವಿಶ್ವಾಸಾರ್ಹತೆಯಲ್ಲಿ ಭಾರತ-ಆಸಿಯಾನ್ ಸಹಕಾರ ಹೆಚ್ಚುತ್ತಿದೆ.
ಶಿಕ್ಷಣ, ಪ್ರವಾಸೋದ್ಯಮ, ವಿಜ್ಞಾನ-ತಂತ್ರಜ್ಞಾನ, ಆರೋಗ್ಯ, ಹಸಿರು ಇಂಧನ, ಸೈಬರ್ ಭದ್ರತೆ ಮತ್ತು ಡಿಜಿಟಲ್ ಮೂಲಸೌಕರ್ಯಗಳಲ್ಲಿ ಸಹಕಾರ ಬಲಪಡಿಸುವ ಕೆಲಸಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ಆಸಿಯಾನ್‌ನ ‘ಇಂಡೋ-ಪೆಸಿಫಿಕ್ ಔಟ್‌ಲುಕ್’ ಒಂದೇ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದನ್ನು ಪ್ರಧಾನಿ ಮೋದಿ ಹೇಳಿದರು.
ಆಸಿಯಾನ್‌ನ ರಾಷ್ಟ್ರ ಸಮನ್ವಯತೆಯಲ್ಲಿ ಮಹತ್ತ್ವದ ಪಾತ್ರ ವಹಿಸಿದ್ದಕ್ಕೆ ಫಿಲಿಪ್ಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರನ್ನು ಪ್ರಧಾನಿ ಮೋದಿ ವಿಶೇಷವಾಗಿ ಪ್ರಶಂಸಿದರು. ಇದೇ ವೇಳೆ, ಆಸಿಯಾನ್‌ನ ಹೊಸ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾದ ಈಸ್ಟ್ ಟೈಮೂರ್‌ಗೆ ಆತ್ಮೀಯ ಸ್ವಾಗತ ಕೋರಿದರು. ಈ ಸೇರ್ಪಡೆಯಿಂದ ಆಸಿಯಾನ್ ಕುಟುಂಬ ಇನ್ನಷ್ಟು ಬಲಗೊಳ್ಳಲಿದೆ ಎಂದರು.
ಅದೇ ರೀತಿ, ಥಾಯ್ಲೆಂಡ್‌ನ ರಾಣಿ ಸಿರಿಕೀತ್ ಕಿತ್ತಿಯಾಕಾರ ಅವರ ನಿಧನಕ್ಕೆ ಆಳವಾದ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಥಾಯ್ಲೆಂಡ್ ಜನತೆಗೆ ಭಾರತದ ಸಾಂತ್ವನ ಹೇಳಿದರು.
ಪ್ರಧಾನಿ ಮೋದಿ ಅವರ ಈ ಭಾಷಣವು ಭಾರತದ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್’ ಮತ್ತು ‘ವಿಶ್ವಗುರು’ ಆಕಾಂಕ್ಷೆಗಳಿಗೆ ಹೊಸ ಜಾಗತಿಕ ಆಯಾಮ ನೀಡಿದೆ. 47ನೇ ಆಸಿಯಾನ್ ಶೃಂಗಸಭೆಯು ಭಾರತ-ಆಸಿಯಾನ್ ಸಂಬಂಧಕ್ಕೆ ಐತಿಹಾಸಿಕ ಮೈಲುಗಲ್ಲಾಗಿ ಉಳಿಯಲಿದೆ.
 
			
 
					




 
                             
                             
                             
                             
                            