‘ನಿಂದನೆಯಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ’: ಮತ್ತೊಂದು ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ಹಂಚಿಕೊಂಡ

ನವದೆಹಲಿ, ಆಗಸ್ಟ್ 1: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಲ ಯುವಕರು ಅವಾಚ್ಯ ಪದಗಳನ್ನು ಬಳಸಿದ ಘಟನೆ ನಡೆದಿತ್ತು. ಈ ವಿವಾದದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ತಡರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದು, ದ್ವೇಷ ಮತ್ತು ನಿಂದನೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದ್ದಾರೆ. ದಾರಿ ತಪ್ಪಿದ ಯುವಕರನ್ನು ಶಿಕ್ಷಿಸುವುದಕ್ಕಿಂತ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಸಮಾಜದ ಜವಾಬ್ದಾರಿ ಎಂದು ಅವರು ಕರೆ ನೀಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಂತರ್ ಮಂತರ್‌ನಲ್ಲಿ ನಡೆದ ಘಟನೆ ದೇಶದ ಜನರಷ್ಟೇ ಅಲ್ಲ, ಜಗತ್ತಿನ ಗಮನವನ್ನೂ ಸೆಳೆದಿದೆ ಎಂದು ಹೇಳಿದರು. ಪ್ರತಿಭಟನೆ ವೇಳೆ ತಮ್ಮ ವಿರುದ್ಧ ಮಾತ್ರವಲ್ಲದೆ ತಮ್ಮ ದಿವಂಗತ ತಾಯಿಯ ಬಗ್ಗೆ ಸಹ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದು ದುಃಖ ತಂದಿದೆ ಎಂದರು. ಇಂತಹ ಭಾಷೆ ಯಾವುದೇ ಸಂಸ್ಕೃತ ಸಮಾಜಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಆದರೆ, ಈ ಘಟನೆಯ ಹಿನ್ನೆಲೆ ಕೋಪ ಅಥವಾ ಪ್ರತೀಕಾರದ ಮನೋಭಾವ ತೋರಿಸುವ ಬದಲು ಕ್ಷಮೆ ಮತ್ತು ಮಾರ್ಗದರ್ಶನದ ಸಂದೇಶವನ್ನು ನೀಡಿದ ಪ್ರಧಾನಿ, “ಬಾಲ್ಯ ಮತ್ತು ಯೌವನದಲ್ಲಿ ತಪ್ಪುಗಳು ಆಗುವುದು ಸಹಜ. ತಪ್ಪು ಮಾಡಿದವರಿಗೆ ಸರಿಯಾದ ದಾರಿ ತೋರಿಸುವುದು ಹಿರಿಯರ ಕರ್ತವ್ಯ. ಅವರನ್ನು ಶಿಕ್ಷಿಸುವುದರಿಂದ ಅಥವಾ ನ್ಯಾಯಾಲಯಗಳಿಗೆ ಎಳೆಯುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ” ಎಂದು ಹೇಳಿದರು.

ತಮ್ಮ ಮಾತುಗಳನ್ನು ಇನ್ನಷ್ಟು ಸ್ಪಷ್ಟಪಡಿಸಲು ಅವರು ಒಂದು ಉದಾಹರಣೆಯನ್ನೂ ನೀಡಿದರು. “ಕೆಲವೊಮ್ಮೆ ನಾಲಿಗೆ ಹಲ್ಲಿನ ನಡುವೆ ಸಿಕ್ಕಿಬಿದ್ದು ಗಾಯವಾಗುತ್ತದೆ. ಹಾಗೆಂದು ನಾವು ಹಲ್ಲುಗಳನ್ನು ಮುರಿದುಕೊಳ್ಳುವುದಿಲ್ಲ. ನಾಲಿಗೆ ಮತ್ತು ಹಲ್ಲು ಎರಡೂ ನಮ್ಮದೇ. ಅದೇ ರೀತಿ ಈ ಯುವಕರೂ ನಮ್ಮವರೇ. ಅವರು ದಾರಿ ತಪ್ಪಿದ್ದರೆ ಅವರನ್ನು ಸರಿಯಾದ ಹಾದಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಪ್ರಧಾನಿ ಹೇಳಿದರು.

ಇದೇ ವೇಳೆ ದೇಶದ ಯುವಜನತೆಗೆ ಭಾವನಾತ್ಮಕ ಸಂದೇಶ ನೀಡಿದ ಮೋದಿ, “ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂಬುದೇ ನನ್ನ ಆಶಯ. ನಾನು ನಿಮ್ಮ ಒಳಿತಿಗಾಗಿ ಬದುಕುತ್ತಿದ್ದೇನೆ. ದೇಶದ ಪ್ರಗತಿಯ ಜೊತೆಗೆ ಯುವಕರು ಸಹ ಮುನ್ನಡೆಯಬೇಕು. ಹೊಸದನ್ನು ಕಲಿಯಿರಿ, ತಪ್ಪುಗಳಿಂದ ಪಾಠ ಕಲಿಯಿರಿ ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿರಿ” ಎಂದು ಕರೆ ನೀಡಿದರು.

ನೋಯ್ಡಾ ಮೂಲದ 25 ವರ್ಷದ ರುಚಿಕಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿತ್ತು. ಘಾಜಿಯಾಬಾದ್‌ನ ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ನೋಯ್ಡಾ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗಾಗಿ ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ಮೂಲತಃ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಕುರಿತ ಬೇಡಿಕೆಗಳ ಹಿನ್ನೆಲೆ ನಡೆದಿತ್ತು. ಈ ಸಂದರ್ಭದಲ್ಲಿ ಕೆಲ ಪ್ರತಿಭಟನಾಕಾರರು ಬಳಸಿದ ಭಾಷೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಜೋರಾಗಿವೆ.

Exit mobile version