ನವದೆಹಲಿ: ದೇಶದ ಜನತೆಗೆ ನವರಾತ್ರಿಯ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕ ಕ್ಷೇತ್ರದಲ್ಲಿ ಐತಿಹಾಸಿಕ ಘೋಷಣೆ ಮಾಡಿದ್ದಾರೆ. ನಾಳೆಯಿಂದ ಆರಂಭವಾಗುವ ನವರಾತ್ರಿಯ ಮೊದಲ ದಿನದಿಂದಲೇ ಜಿಎಸ್‌ಟಿ 2.0 ಜಾರಿಗೆ ಬರಲಿದೆ. ಈ ಸುಧಾರಣೆಯಿಂದ ದೇಶದ ಎಲ್ಲಾ ವರ್ಗದ ಜನರಿಗೆ ಉಳಿತಾಯದ ಉತ್ಸವ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಕ್ರಮವು ಭಾರತದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾಳೆ ಸೂರ್ಯೋದಯದಿಂದ ಜಿಎಸ್‌ಟಿ ಕಡಿತ ಜಾರಿಗೆ ಬರಲಿದೆ. ಇದು ಬಡವರು, ಮಧ್ಯಮ ವರ್ಗ, ಯುವ ಜನತೆ, ರೈತರು, ಮಹಿಳೆಯರು ಮತ್ತು ಉದ್ಯಮಿಗಳಿಗೆ ಒಂದು ದೊಡ್ಡ ಉಡುಗೊರೆಯಾಗಿದೆ. ಈ ಸುಧಾರಣೆಯಿಂದ ಸರಕುಗಳ ಖರೀದಿ ಸುಲಭವಾಗಲಿದೆ, ಜನರ ಖುಷಿ ಹೆಚ್ಚಾಗಲಿದೆ ಮತ್ತು ದೇಶದ ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಸಮಾನ ಕೊಡುಗೆ ದೊರೆಯಲಿದೆ,” ಎಂದು ಘೋಷಿಸಿದರು.
ಜಿಎಸ್‌ಟಿ ಕಡಿತದಿಂದ ದೇಶದ ಜನರು ದಶಕಗಳಿಂದ ಎದುರಿಸುತ್ತಿದ್ದ ತೆರಿಗೆ ಜಾಲದಿಂದ ಮುಕ್ತರಾಗಲಿದ್ದಾರೆ. “ಹಿಂದೆ ಸರಕು ಸಾಗಾಟಕ್ಕೆ ಎಷ್ಟೊಂದು ಪ್ರಕ್ರಿಯೆಗಳು, ಎಷ್ಟೊಂದು ತೆರಿಗೆಗಳು, ಟೋಲ್‌ಗಳು ಇದ್ದವು. ಈ ಎಲ್ಲವೂ ಈಗ ಇತಿಹಾಸವಾಗಲಿದೆ,” ಎಂದು ಮೋದಿ ಹೇಳಿದರು. 2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಿಎಸ್‌ಟಿ ಸುಧಾರಣೆಗೆ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ನೆನಪಿಸಿದರು. “ಬೆಂಗಳೂರಿನಿಂದ 570 ಕಿ.ಮೀ. ದೂರಕ್ಕೆ ಉತ್ಪನ್ನ ಸಾಗಾಟಕ್ಕೆ ಉದ್ಯಮಿಗಳಿಗೆ ಎದುರಾಗುತ್ತಿದ್ದ ತೊಂದರೆಗಳ ಬಗ್ಗೆ ಓದಿದ್ದೆ. ಈಗ ಜಿಎಸ್‌ಟಿ ಕಡಿತದಿಂದ ಆ ಎಲ್ಲಾ ಅಡೆತಡೆಗಳು ದೂರವಾಗಲಿವೆ,” ಎಂದು ಅವರು ತಿಳಿಸಿದರು.
ನವರಾತ್ರಿಯ ಶಕ್ತಿಯ ಪ್ರತೀಕದೊಂದಿಗೆ ಜಿಎಸ್‌ಟಿ 2.0 ಜಾರಿಯಾಗಲಿದೆ. ಈ ಕ್ರಮವು ಆಹಾರ, ಔಷಧಿ, ವಿಮೆ ಸೇವೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶೇ.5 ಮತ್ತು ಶೇ.18ರ ಜಿಎಸ್‌ಟಿ ಸ್ಲಾಬ್‌ಗಳನ್ನು ಜಾರಿಗೆ ತರಲಿದೆ. ಇದರಿಂದ ಜನರು ಸುಲಭವಾಗಿ ಸರಕುಗಳನ್ನು ಖರೀದಿಸಬಹುದು. ಉದ್ಯಮಿಗಳಿಗೆ ವ್ಯಾಪಾರವು ಇನ್ನಷ್ಟು ಸರಳವಾಗಲಿದೆ. “ಈ ಜಿಎಸ್‌ಟಿ ಕಡಿತವು ಆತ್ಮನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸುವ ದಿಶೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ದೇಶದ ಎಲ್ಲಾ ವರ್ಗದ ಜನರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ತಂದುಕೊಡಲಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.