G20 ಶೃಂಗಸಭೆ: ಈ 3 ಉಪಕ್ರಮ ಪ್ರಸ್ತಾಪಿಸಿ, ಜಗತ್ತಿನ ಗಮನ ಸೆಳೆದ ಪ್ರಧಾನಿ ಮೋದಿ

Untitled design (43)

ಜೋಹಾನ್ಸ್‌ಬರ್ಗ್, ನವೆಂಬರ್ 22, 2025: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ G20 ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗುರಿಯಾಗುವ ಮೂರು ಹೊಸ ಉಪಕ್ರಮಗಳನ್ನು ಪ್ರಸ್ತಾಪಿಸಿದರು. ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಕುರಿತ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ಅಭಿವೃದ್ಧಿ ಮಾದರಿಗಳು ಪ್ರಕೃತಿಯನ್ನು ನಾಶಪಡಿಸುತ್ತಿವೆ. ಯಾರನ್ನೂ ಹಿಂದೆ ಬಿಡದೆ, ಎಲ್ಲರನ್ನೂ ಒಳಗೊಂಡ ಸಮಾವೇಶಿ ಬೆಳವಣಿಗೆಯೇ ಏಕೈಕ ದಾರಿ ಎಂದು ಒತ್ತಿ ಹೇಳಿದರು.

1. ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ

(Global Repository of Traditional Knowledge) ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಸಾಂಪ್ರದಾಯಿಕ ಜೀವನ ವಿಧಾನಗಳ ರಕ್ಷಣೆಯ ಕರೆಯೊಂದಿಗೆ ಆರಂಭಿಸಿದರು. “ಪ್ರಪಂಚದಾದ್ಯಂತದ ಸಾವಿರಾರು ವರ್ಷಗಳ ಸಾಂಪ್ರದಾಯಿಕ ಜ್ಞಾನವು ಪರಿಸರ ಸಂರಕ್ಷಣೆ, ಸಮಾಜದ ಸಮತೋಲನ ಮತ್ತು ಸುಸ್ಥಿರ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ. ಆದರೆ ಇದು ಈಗ ಮರೆಯಾಗುತ್ತಿದೆ. ಎಂದು ಕಳವಳ ವ್ಯಕ್ತಪಡಿಸಿದ ಅವರು, G20 ಅಡಿಯಲ್ಲಿ ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ ಸ್ಥಾಪಿಸುವ ಪ್ರಸ್ತಾಪ ಮಂಡಿಸಿದರು. ಈ ಭಂಡಾರದಲ್ಲಿ ಎಲ್ಲ ದೇಶಗಳ ಸಾಂಪ್ರದಾಯಿಕ ಜ್ಞಾನ, ಆಯುರ್ವೇದ, ಆಫ್ರಿಕಾದ ಗಿಡಮೂಲಿಕೆ ಚಿಕಿತ್ಸೆ, ದಕ್ಷಿಣ ಅಮೆರಿಕಾದ ಸ್ಥಳೀಯ ಜ್ಞಾನ – ಎಲ್ಲವನ್ನೂ ಡಿಜಿಟಲ್ ಆಕಾರದಲ್ಲಿ ಸಂಗ್ರಹಿಸಿ, ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಇದು ಮುಂದಿನ ಪೀಳಿಗೆಗೆ ಸುಸ್ಥಿರ ಜೀವನದ ಮಾರ್ಗವನ್ನು ಕಲಿಸುತ್ತದೆ. ಭಾರತದ ‘ಭಾರತೀಯ ಜ್ಞಾನ ವ್ಯವಸ್ಥೆಗಳು’ ಇದಕ್ಕೆ ಬುನಾದಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ.

2. G20-ಆಫ್ರಿಕಾ ಬಹು-ಕೌಶಲ್ಯ ಕಾರ್ಯಕ್ರಮ

ಆಫ್ರಿಕಾ ಅಭಿವೃದ್ಧಿ ಹೊಂದಿದರೆ ಇಡೀ ಜಗತ್ತೇ ಅಭಿವೃದ್ಧಿ ಹೊಂದುತ್ತದೆ ಎಂಬ ಮಾತಿನೊಂದಿಗೆ ಪ್ರಧಾನಿ ಮೋದಿ ಎರಡನೇ ಉಪಕ್ರಮ ಪ್ರಕಟಿಸಿದರು. ಮುಂದಿನ 10 ವರ್ಷಗಳಲ್ಲಿ ಆಫ್ರಿಕಾದ 10 ಮಿಲಿಯನ್ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ‘G20-ಆಫ್ರಿಕಾ ಬಹು-ಕೌಶಲ್ಯ ಕಾರ್ಯಕ್ರಮ’ ಆರಂಭಿಸಬೇಕು. ಇದಕ್ಕಾಗಿ ಮೊದಲು 1 ಮಿಲಿಯನ್ ಪ್ರಮಾಣೀಕೃತ ತರಬೇತುದಾರರನ್ನುತಯಾರಿಸಬೇಕು. ಈ ತರಬೇತುದಾರರು ಲಕ್ಷಾಂತರ ಯುವಕರನ್ನು ತರಬೇತುಗೊಳಿಸಿ, ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ಸ್ಥಿರ ಪ್ರತಿಭಾ ಹರಿವು ಒದಗಿಸುತ್ತಾರೆ” ಎಂದು ಅವರು ಕರೆ ನೀಡಿದರು. ಎಲ್ಲ G20 ದೇಶಗಳು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.

3. ಮಾದಕ ದ್ರವ್ಯ-ಭಯೋತ್ಪಾದನಾ ನಂಟನ್ನು ಮುರಿಯುವ ವಿಶೇಷ ಉಪಕ್ರಮ

ತಮ್ಮ ಮೂರನೇ ಪ್ರಸ್ತಾಪದಲ್ಲಿ ಪ್ರಧಾನಿ ಮೋದಿ ಜಾಗತಿಕ ಭದ್ರತೆಯ ಗಂಭೀರ ಸವಾಲನ್ನು ಪ್ರಸ್ತಾಪಿಸಿದರು. “ಫೆಂಟನಿಲ್‌ನಂತಹ ಸಂಶ್ಲೇಷಿತ ಔಷಧಗಳು ವೇಗವಾಗಿ ಹರಡುತ್ತಿವೆ. ಇದು ಸಾರ್ವಜನಿಕ ಆರೋಗ್ಯ ಮತ್ತು ಜಾಗತಿಕ ಭದ್ರತೆಗೆ ದೊಡ್ಡ ಬೆದರಿಕೆ. ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಯ ನಡುವಿನ ನಂಟನ್ನು ಮುರಿಯಬೇಕು” ಎಂದು ಒತ್ತಿ ಹೇಳಿದ ಅವರು, G20 ಮಟ್ಟದಲ್ಲಿ ವಿಶೇಷ ಉಪಕ್ರಮ ರೂಪಿಸಬೇಕೆಂದು ಕೋರಿದರು. ಕಳ್ಳಸಾಗಣೆ ಜಾಲಗಳನ್ನು ಛಿದ್ರಗೊಳಿಸುವುದು, ಅಕ್ರಮ ಹಣದ ಹರಿವನ್ನು ತಡೆಯುವುದು, ಭಯೋತ್ಪಾದನೆಗೆ ಹಣಕಾಸು ಸರಬರಾಜು ನಿಲ್ಲಿಸುವುದು ಇದಕ್ಕೆ ಎಲ್ಲ ದೇಶಗಳು ಆರ್ಥಿಕ ಮತ್ತು ಭದ್ರತಾ ಕ್ರಮಗಳನ್ನು ಒಟ್ಟಾಗಿ ಬಳಸಬೇಕು ಎಂದು ಮೋದಿ ಸಲಹೆ ನೀಡಿದರು.

G20 ಶೃಂಗಸಭೆಯಲ್ಲಿ ಆಫ್ರಿಕಾದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದು ಐತಿಹಾಸಿಕವಾದರೆ, ಪ್ರಧಾನಿ ಮೋದಿ ಅವರ ಈ ಮೂರು ಉಪಕ್ರಮಗಳು ಜಾಗತಿಕ ಚರ್ಚೆಯ ಕೇಂದ್ರ ಬಿಂದುವಾಗಿವೆ. ಸಾಂಪ್ರದಾಯಿಕ ಜ್ಞಾನ ಸಂರಕ್ಷಣೆ, ಆಫ್ರಿಕಾದ ಯುವ ಶಕ್ತಿಯ ಸಬಲೀಕರಣ ಮತ್ತು ಮಾದಕ-ಭಯೋತ್ಪಾದನಾ ನಂಟನ್ನು ಮುರಿಯುವ ಕ್ರಮ–ಇದೆಲ್ಲವೂ ಭಾರತದ “ವಸುಧೈವ ಕುಟುಂಬಕಂ” ತತ್ವದ ಪ್ರತಿಫಲನ ಎಂದು ಜಾಗತಿಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಶೃಂಗಸಭೆಯಲ್ಲಿ ಭಾರತದ ಪಾತ್ರ ಇನ್ನಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.

Exit mobile version