ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ: ಪ್ರಧಾನಿ ನರೇಂದ್ರ ಮೋದಿ

Untitled design 2025 08 09t211027.879

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 10ರಂದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನ ಮೂಲಸೌಕರ್ಯವನ್ನು ಸುಧಾರಿಸುವ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಮೋದಿಯವರು, “ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ

ಪ್ರಧಾನಿ ಮೋದಿಯವರು ಕೆ.ಎಸ್.ಆರ್ ರೈಲು ನಿಲ್ದಾಣದಿಂದ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲುಗಳು ದೇಶದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಲಿವೆ. ಈ ಯೋಜನೆಯಿಂದ ಬೆಂಗಳೂರಿನಿಂದ ಇತರ ನಗರಗಳಿಗೆ ವೇಗವಾಗಿ, ಆರಾಮದಾಯಕವಾಗಿ ಪ್ರಯಾಣಿಸುವ ಅವಕಾಶ ಒದಗಿಸಲಿದೆ.

ಬೆಂಗಳೂರು ಮೆಟ್ರೋ: ಯೆಲ್ಲೋ ಲೈನ್‌ಗೆ ಉದ್ಘಾಟನೆ

ನಮ್ಮ ಮೆಟ್ರೋದ ಹಳದಿ ಮಾರ್ಗ (ಯೆಲ್ಲೋ ಲೈನ್) ಉದ್ಘಾಟನೆ ಈ ಭೇಟಿಯ ಪ್ರಮುಖ ಆಕರ್ಷಣೆಯಾಗಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ. ಉದ್ದದ ಈ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದೆ. 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಯೆಲ್ಲೋ ಲೈನ್‌ನ ವಿಶೇಷತೆ ಎಂದರೆ ಚಾಲಕ ರಹಿತ ರೈಲುಗಳ ಸಂಚಾರ. ಆರಂಭದಲ್ಲಿ ಮೂರು ರೈಲುಗಳು ಸಂಚರಿಸಲಿದ್ದು, ದಕ್ಷಿಣ ಬೆಂಗಳೂರನ್ನು ನಗರದ ಕೇಂದ್ರ ಭಾಗಕ್ಕೆ ಸಂಪರ್ಕಿಸಲಿವೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿ, ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ.

ಇದೇ ಸಂದರ್ಭದಲ್ಲಿ, ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಪ್ರಧಾನಿಯವರು ಬೆಂಗಳೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಮನೋಹರ ಲಾಲ್ ಖಟ್ಟರ್, ಅಶ್ವಿನಿ ವೈಷ್ಣವ್, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸಂಚಾರ ನಿರ್ಬಂಧಗಳು: ಟ್ರಾಫಿಕ್ ಪೊಲೀಸರಿಂದ ಬಿಗಿ ಭದ್ರತೆ

ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಬೆಳಗ್ಗೆ 8:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾರೇನಹಳ್ಳಿ ಮುಖ್ಯರಸ್ತೆ (ರಾಜಲಕ್ಷ್ಮಿ ಜಂಕ್ಷನ್‌ನಿಂದ 18ನೇ ಮುಖ್ಯರಸ್ತೆಯವರೆಗೆ) ಮತ್ತು ಮಾರೇನಹಳ್ಳಿ ಈಸ್ಟ್ ಎಂಡ್ ಜಂಕ್ಷನ್‌ನಿಂದ ಅರವಿಂದ್ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿರುತ್ತದೆ. ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:30 ರವರೆಗೆ ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್, ಹೊಸೂರು ರಸ್ತೆ, ಇನ್ಫೋಸಿಸ್ ಅವೆನ್ಯೂ, ವೇಲಾಂಕಣಿ ರಸ್ತೆ ಮತ್ತು ಎಚ್ಚಿ ಅವೆನ್ಯೂ ರಸ್ತೆಗಳಲ್ಲಿ ಟ್ರಾಫಿಕ್ ನಿರ್ಬಂಧ ಇರಲಿದೆ.

Exit mobile version