ಪೆಟ್ರೋಲ್ ದರ ಏರಿಕೆ ಭೀತಿ: ವಾಟರ್ ಜಾರ್‌ಗೆ ಪೆಟ್ರೋಲ್ ತುಂಬಿಸಿದ ವಾಹನ ಸವಾರ.!

Peee

ಚೆನ್ನೈ, ಮಾರ್ಚ್ 12: ಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ ಪೆಟ್ರೋಲ್ ದರ ಏರಿಕೆ ಮತ್ತು ಪೆಟ್ರೋಲ್ ಸಿಗುವುದಿಲ್ಲ ಎಂಬ ಗಾಳಿ ಸುದ್ದಿ ಹಬ್ಬಿದೆ. ಈ ಗಾಳಿ ಸುದ್ದಿಯಿಂದ ಜನರು ಪೆಟ್ರೋಲ್ ಬಂಕ್‌ಗಳತ್ತ ಮುಗಿ ಬಿದ್ದಿದ್ದಾರೆ. ನೀರಿನ ಕ್ಯಾನ್‌ ಹಿಡಿದು ಪೆಟ್ರೋಲ್‌ ತುಂಬಿಸಿಕೊಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಕೆಲವು ಕಡೆ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಇದನ್ನೇ ಆಧಾರ ಮಾಡಿಕೊಂಡು ಕೆಲವರು ಮುಂದೆ ಪೆಟ್ರೋಲ್ ಪೂರೈಕೆಯಲ್ಲಿಯೂ ವ್ಯತ್ಯಯವಾಗಬಹುದು ಎಂದು ಗಾಳಿ ಸುದ್ದಿ ಹರಡಿದ್ದಾರೆ. ಪೆಟ್ರೋಲ್ ಸಿಗುವುದಿಲ್ಲ ಅಥವಾ ದರ ಭಾರೀ ಏರಿಕೆಯಾಗಲಿದೆ ಎಂಬ ಆತಂಕದಿಂದ ಜನರು ಮುನ್ನೆಚ್ಚರಿಕೆಯಾಗಿ ತಮ್ಮ ವಾಹನಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಳ್ಳಲು ಬಂಕ್‌ಗಳತ್ತ ಧಾವಿಸಿದ್ದಾರೆ.

ತಮಿಳುನಾಡಿನ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರು ಉದ್ದ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ. ವಿಶೇಷವಾಗಿ ಚೆನ್ನೈ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಜನರ ದಟ್ಟಣೆ ಹೆಚ್ಚಾಗಿದೆ.

ಈ ನಡುವೆ ಒಂದು ವಿಚಿತ್ರ ಘಟನೆ ಎಲ್ಲರ ಗಮನ ಸೆಳೆದಿದೆ. ವಾಹನ ಸವಾರನೊಬ್ಬ ತನ್ನ ಬೈಕ್ ಅಥವಾ ಕಾರಿಗೆ ಪೆಟ್ರೋಲ್ ಹಾಕಿಸುವುದರ ಜೊತೆಗೆ ಮನೆಯಲ್ಲಿದ್ದ ಸುಮಾರು 15 ಲೀಟರ್ ಸಾಮರ್ಥ್ಯದ ನೀರಿನ ಜಾರ್ ಅನ್ನು ಬಂಕ್‌ಗೆ ತಂದು ಅದರಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೋಗಿದ್ದಾನೆ. ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೋದಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಸವಾರನು ನೀರಿನ ಜಾರ್ ಅನ್ನು ಹಿಡಿದು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಪೆಟ್ರೋಲ್ ತುಂಬಿಸುವಂತೆ ಹೇಳುತ್ತಿರುವುದು ಕಾಣುತ್ತದೆ. ಇದನ್ನು ಕಂಡ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದು ಗಾಳಿ ಸುದ್ದಿಗೆ ಜನರು ಎಷ್ಟು ಬೇಗ ನಂಬಿಕೆ ಇಡುತ್ತಾರೆ ಎಂಬುದಕ್ಕೆ ಉದಾಹರಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಇಂಧನಗಳ ಸರಬರಾಜು ಸಾಮಾನ್ಯವಾಗಿ ನಡೆಯುತ್ತಿದ್ದು, ಜನರು ಗಾಳಿ ಸುದ್ದಿಗಳಿಗೆ ಒಳಗಾಗದೆ ಶಾಂತವಾಗಿ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಗಾಳಿ ಸುದ್ದಿಗಳ ಪರಿಣಾಮ ಜನರು ಹೇಗೆ ಆತಂಕಕ್ಕೊಳಗಾಗುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಹೇಳುತ್ತಿದ್ದಾರೆ.

Exit mobile version