ತುಮಕೂರು, ಮಾರ್ಚ್ 12: ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮದುವೆಯಾದ ಕೇವಲ ಮೂರು ತಿಂಗಳೊಳಗೆ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿರುವ ಶಾಕಿಂಗ್ ಮಾಹಿತಿ ಹೊರಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗುಜರಿ ವ್ಯಾಪಾರಿಯಾಗಿದ್ದ ಮನ್ಸೂರ್ ಪಾಷ ಕೊಲೆಯಾದ ವ್ಯಕ್ತಿ. ಬಂಧಿತರಲ್ಲಿ ಮೃತ ಮನ್ಸೂರ್ ಪಾಷ ಪತ್ನಿ ಫರ್ಜಾನಾ (31), ಆಕೆಯ ಪ್ರಿಯಕರ ಧನರಾಜ್ (24), ಜೊತೆಗೆ ವೆಂಕಟೇಶ್ (24) ಮತ್ತು ದರ್ಶನ್ (24) ಸೇರಿದ್ದಾರೆ. ಬಂಧಿತರು ಚಿಕ್ಕಮಗಳೂರು ಮೂಲದವರಾಗಿದ್ದು, ಇವರಿಂದ ಕೊಲೆ ನಡೆಸಲು ಬಳಸಿದ ಬೊಲೆರೋ ಪಿಕಪ್ ವಾಹನ, ಪಲ್ಸರ್ ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ
ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ ಮನ್ಸೂರ್ ಪಾಷಗೆ ಇದೇ ವರ್ಷ ಜನವರಿಯಲ್ಲಿ ಫರ್ಜಾನಾ ಎಂಬಾಕೆಯ ಜೊತೆ ಮದುವೆ ಆಗಿತ್ತು. ಕುಟುಂಬಸ್ಥರ ನಿಶ್ಚಯದಂತೆ ಈ ವಿವಾಹ ನಡೆದಿತ್ತು. ಮದುವೆಯಾದ ನಂತರ ಇಬ್ಬರೂ ತಿಪಟೂರಿನಲ್ಲಿ ವಾಸವಾಗಿದ್ದರು.
ಮಾರ್ಚ್ 4ರಂದು ಗುಜರಿ ಸಾಮಗ್ರಿ ತರಲು ಹೋಗಿದ್ದ ಮನ್ಸೂರ್ ಪಾಷ, ಬಳಿಕ ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ನಂತರ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಸಮೀಪದ ತೋಟವೊಂದರಲ್ಲಿ ಮನ್ಸೂರ್ ಪಾಷನ ಶವ ಪತ್ತೆಯಾಯಿತು. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ತನಿಖೆಯಲ್ಲಿ ಸಿಕ್ಕ ಸ್ಫೋಟಕ ಮಾಹಿತಿ
ಪ್ರಕರಣವನ್ನು ಪೊಲೀಸರು ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ನಡೆಸಿದರು. ಆರಂಭದಲ್ಲಿ ಚಿಕ್ಕಮಗಳೂರಿನ ಮೂವರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿತು.
ವಿಚಾರಣೆ ವೇಳೆ ಬಂಧಿತರಲ್ಲಿ ಒಬ್ಬನಾದ ಧನರಾಜ್ ಜೊತೆ ಮನ್ಸೂರ್ ಪಾಷನ ಪತ್ನಿ ಫರ್ಜಾನಾ ಕಳೆದ ಏಳು ತಿಂಗಳಿನಿಂದ ಪ್ರೇಮ ಸಂಬಂಧ ಹೊಂದಿದ್ದಳು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಫರ್ಜಾನಾ ತನ್ನ ಅಕ್ಕನನ್ನು ಭೇಟಿಯಾಗಲು ಚಿಕ್ಕಮಗಳೂರಿಗೆ ತೆರಳುತ್ತಿದ್ದಾಗ ವೆಂಕಟೇಶ್ ಎಂಬಾತನ ಮೂಲಕ ಧನರಾಜ್ ಪರಿಚಯವಾಗಿದ್ದ. ನಂತರ ಈ ಪರಿಚಯ ಪ್ರೀತಿಗೆ ತಿರುಗಿತ್ತು.
ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಚಿಕ್ಕಮಗಳೂರಿನ ಹಲವೆಡೆ ಒಟ್ಟಿಗೆ ಓಡಾಡುತ್ತಿದ್ದರು. ಒಂದು ವೇಳೆ ತಿಪಟೂರು ರೈಲು ನಿಲ್ದಾಣದ ಬಳಿ ಇಬ್ಬರೂ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ಈ ಘಟನೆಯ ನಂತರ ಕುಟುಂಬಸ್ಥರು ತುರ್ತಾಗಿ ಫರ್ಜಾನಾಗೆ ಮನ್ಸೂರ್ ಪಾಷ ಜೊತೆ ವಿವಾಹ ಮಾಡಿಸಿದ್ದರು.
ಮದುವೆಯಾದ ನಂತರವೂ ಫರ್ಜಾನಾ ಮತ್ತು ಧನರಾಜ್ ನಡುವಿನ ಸಂಬಂಧವನ್ನು ಬಿಟ್ಟಿರಲಿಲ್ಲ. ಹೊಸ ಸಿಮ್ ಕಾರ್ಡ್ ಖರೀದಿ ಮಾಡಿ ಫರ್ಜಾನಾ ಮತ್ತೆ ಧನರಾಜ್ ನನ್ನು ಸಂಪರ್ಕಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರಿಗೆ ಅಡ್ಡಿಯಾಗಿದ್ದ ಮನ್ಸೂರ್ ಪಾಷನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಈ ಯೋಜನೆಗೆ ದರ್ಶನ್ ಮತ್ತು ವೆಂಕಟೇಶ್ ಸಹ ಸಹಾಯ ಮಾಡಿದ್ದರು. ಮಾರ್ಚ್ 4ರಂದು ದರ್ಶನ್ ಮುಖಾಂತರ ಗುಜರಿ ಸಾಮಗ್ರಿ ಇದೆ ಎಂದು ಹೇಳಿ ಮನ್ಸೂರ್ ಪಾಷಗೆ ಕರೆ ಮಾಡಲಾಗಿತ್ತು. ಆತನನ್ನು ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಸಮೀಪಕ್ಕೆ ಕರೆಸಿಕೊಂಡು, ಅಲ್ಲಿ ಹೊಂಚು ಹಾಕಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಕೊಲೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ದರ್ಶನ್ ಮಾಡಿದ ಕರೆ ಹಾಗೂ ಮೊಬೈಲ್ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಈ ಪ್ರಕರಣವನ್ನು ತಿಪಟೂರು ಗ್ರಾಮಾಂತರ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಆರೋಪಿಗಳಿಂದ ವಾಹನಗಳು ಮತ್ತು ಇತರೆ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
