ಪರೀಕ್ಷಾ ಒತ್ತಡ ದೂರವಾಗಲಿ: ‘ಪರೀಕ್ಷಾ ಪೆ ಚರ್ಚಾ’ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದ ಪ್ರಧಾನಿ

Untitled design 2026 02 06T173431.259

ನವದೆಹಲಿ: ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಎದುರಿಸುವ ಮಾನಸಿಕ ಒತ್ತಡ, ಆತಂಕ ಮತ್ತು ಗೊಂದಲಗಳನ್ನು ದೂರಮಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದ ‘ಪರೀಕ್ಷಾ ಪೆ ಚರ್ಚಾ’ (PPC) ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸುದೀರ್ಘವಾಗಿ ಮಾತನಾಡಿದರು. ಪರೀಕ್ಷೆಯನ್ನು ಒಂದು ಹಬ್ಬದಂತೆ ಸಂಭ್ರಮಿಸಿ ಎಂದು ಅವರು ಕರೆ ನೀಡಿದರು.

ಈ ಬಾರಿಯ ಸಂವಾದದಲ್ಲಿ ಮೋದಿ ಅವರು ನೀಡಿದ ಪ್ರಮುಖ 7 ಮಂತ್ರಗಳು ಇಲ್ಲಿವೆ:

1. ಓದಿನ ಬಗ್ಗೆ ಪ್ರಧಾನಿಯವರ ‘ಗುರುಮಂತ್ರ’

ಓದುವ ಪ್ರಕ್ರಿಯೆಯನ್ನು ಕೃಷಿಗೆ ಹೋಲಿಸಿದ ಪ್ರಧಾನಿ, ಮೊದಲು ಮನಸ್ಸನ್ನು ಸಜ್ಜುಗೊಳಿಸಿ (ಉಳುಮೆ ಮಾಡಿ), ನಂತರ ಏಕಾಗ್ರತೆ ಬೆಳೆಸಿಕೊಳ್ಳಿ (ಜೋಡಿಸಿ), ಆಮೇಲೆ ನೀವು ಓದಬೇಕಾದ ವಿಷಯಗಳನ್ನು ನಿಮ್ಮ ಮುಂದೆ ಇಟ್ಟುಕೊಳ್ಳಿ ಎಂದರು. ಅಲ್ಲದೆ, ಗುರಿ ಹೇಗಿರಬೇಕೆಂದರೆ, ಅದು ನಮ್ಮ ತಲುಪುವ ಹಾದಿಯಲ್ಲಿರಬೇಕು (Within Reach), ಆದರೆ ತಕ್ಷಣವೇ ಕೈಗೆ ಸಿಗುವಂತಿರಬಾರದು (Not in Grip) ಎಂದು ಹೇಳಿದರು.

2. ಮಹಿಳಾ ಸಬಲೀಕರಣದ ಸಂಕೇತ ಅಸ್ಸಾಮಿ ‘ಗಮೋಸಾ’

ಈ ಬಾರಿ ಅಸ್ಸಾಂನ ಸಾಂಪ್ರದಾಯಿಕ ವಸ್ತ್ರ ‘ಗಮೋಸಾ’ ಧರಿಸಿದ್ದ ಪ್ರಧಾನಿ ಅದರ ಮಹತ್ವ ವಿವರಿಸುತ್ತಾ, ಇದು ಈಶಾನ್ಯ ಭಾರತದ ಮಹಿಳಾ ಶಕ್ತಿಯ ಸಂಕೇತ. ಪ್ರೀತಿ ಮತ್ತು ಶ್ರದ್ಧೆಯಿಂದ ಮಹಿಳೆಯರೇ ನೇಯುವ ಈ ವಸ್ತ್ರವು ಸಾಂಸ್ಕೃತಿಕ ಗೌರವದ ಸಂಕೇತ ಎಂದು ಮಹಿಳಾ ಸಬಲೀಕರಣದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

3. ಅಂಕಗಳಿಗಾಗಿ ಓದಬೇಡಿ, ಜೀವನಕ್ಕಾಗಿ ಓದಿ

ಶಿಕ್ಷಣ ಎಂದಿಗೂ ಹೊರೆಯಾಗಬಾರದು. ಅರೆಬರೆ ಶಿಕ್ಷಣ ಯಶಸ್ಸು ತರುವುದಿಲ್ಲ. ಕೇವಲ ಅಂಕಪಟ್ಟಿಯ ಮೇಲೆ ಗಮನ ಹರಿಸುವ ಬದಲು, ನಿಮ್ಮ ವ್ಯಕ್ತಿತ್ವ ವಿಕಸನ ಮತ್ತು ಜೀವನದ ಸುಧಾರಣೆಯತ್ತ ಗಮನ ಹರಿಸಿ. ಜೀವನವು ತರಗತಿಯ ಗೋಡೆಗಳಿಗಿಂತಲೂ ವಿಶಾಲವಾದುದು ಎಂದು ಪ್ರಧಾನಿ ಮೌಲ್ಯಯುತ ಶಿಕ್ಷಣದ ಬಗ್ಗೆ ಮಾತನಾಡಿದರು.

4. ಭವಿಷ್ಯದ ಮೇಲೆ ಕಣ್ಣಿರಲಿ 

ತಮ್ಮ ವೈಯಕ್ತಿಕ ಜೀವನದ ಉದಾಹರಣೆ ನೀಡುತ್ತಾ, ನನ್ನ 75ನೇ ಜನ್ಮದಿನದಂದು ಒಬ್ಬರು ಶುಭ ಹಾರೈಸಿದಾಗ ನಾನು ಹೇಳಿದೆ-75 ವರ್ಷ ಕಳೆದದ್ದಲ್ಲ, ಇನ್ನು 25 ವರ್ಷ ಬಾಕಿ ಇದೆ ಎನ್ನುವುದು ಮುಖ್ಯ. ನಾನು ಯಾವಾಗಲೂ ಕಳೆದ ಹೋದ ದಿನಗಳಿಗಿಂತ, ಮುಂದೆ ಉಳಿದಿರುವ ದಿನಗಳ ಬಗ್ಗೆ ಯೋಚಿಸುತ್ತೇನೆ ಎನ್ನುವ ಮೂಲಕ ಸಕಾರಾತ್ಮಕತೆಯ ಪಾಠ ಮಾಡಿದರು.

5. ಇಂಟರ್ನೆಟ್ ಮತ್ತು ಗೇಮಿಂಗ್ ಕುರಿತು ಕಿವಿಮಾತು

ಭಾರತದಲ್ಲಿ ಇಂಟರ್ನೆಟ್ ಅಗ್ಗವಾಗಿದೆ ಎಂದು ಸಮಯ ವ್ಯರ್ಥ ಮಾಡಬೇಡಿ ಎಂದು ಎಚ್ಚರಿಸಿದ ಮೋದಿ, ಗೇಮಿಂಗ್ ಬಗ್ಗೆ ಹೊಸ ದೃಷ್ಟಿಕೋನ ನೀಡಿದರು. ಗೇಮಿಂಗ್ ಕೇವಲ ಮನರಂಜನೆಯಲ್ಲ, ಅದೊಂದು ಕೌಶಲ (Skill). ಅದು ಮೆದುಳಿನ ವಿಕಾಸಕ್ಕೆ ಸಹಕಾರಿ. ಆದರೆ ಉತ್ತಮ ಗುಣಮಟ್ಟದ ಆಟಗಳನ್ನು ಆರಿಸಿ ಪರಿಣತಿ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.

6. ಜ್ಞಾನ ಮತ್ತು ಕೌಶಲದ ಸಮತೋಲನ

ಲೈಫ್ ಸ್ಕಿಲ್ ಮತ್ತು ಪ್ರೊಫೆಷನಲ್ ಸ್ಕಿಲ್ ನಡುವೆ ಸಮತೋಲನ ಅಗತ್ಯ. ಜ್ಞಾನವಿಲ್ಲದೆ ಯಾವುದೇ ಕೌಶಲ ಸಿದ್ಧಿಸುವುದಿಲ್ಲ. ಕೌಶಲದ ಬೇರೇ ಜ್ಞಾನ ಎಂದು ಹೇಳಿದರು.

7. ಶಿಕ್ಷಕರಿಗೊಂದು ಕಿವಿಮಾತು

ವಿದ್ಯಾರ್ಥಿಗಳ ವೇಗಕ್ಕಿಂತ ಶಿಕ್ಷಕರ ವೇಗ ಒಂದು ಹೆಜ್ಜೆ ಮುಂದಿರಬೇಕು ಎಂದು ಹೇಳುವ ಮೂಲಕ ಶಿಕ್ಷಕರು ನಿರಂತರವಾಗಿ ಅಪ್‌ಡೇಟ್ ಆಗಿರಬೇಕು ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

Exit mobile version