ಕಲಬುರಗಿಯಲ್ಲಿ ಬೆಳಂ ಬೆಳಗ್ಗೆ ಗುಂಡಿನ‌ ಸದ್ದು: ಜೈಲಿಂದ ಪರಾರಿಯಾಗಿದ್ದ ಕೈದಿಗೆ ಗುಂಡೇಟು

ಷ್ಯ (2)

ಕಲಬುರಗಿ: ಜೈಲಿನಿಂದ ಪರಾರಿಯಾಗಿದ್ದ ಕೈದಿಯನ್ನು ಬಂಧಿಸಲು ತೆರಳಿದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪದ ಹಿನ್ನೆಲೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿರುವ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ಕಲಬುರಗಿಯಲ್ಲಿ ನಡೆದಿದೆ. ಗಾಯಗೊಂಡ ಕೈದಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಪರಾರಿಯಾಗಿರುವ ಇಬ್ಬರು ಕೈದಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಗುಂಡೇಟಿಗೆ ಒಳಗಾದ ಕೈದಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈತ ಇತ್ತೀಚೆಗೆ ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳಲ್ಲಿ ಒಬ್ಬನಾಗಿದ್ದಾನೆ. ಪರಾರಿಯಾಗಿದ್ದ ಆರೋಪಿಗಳ ಪತ್ತೆಗೆ ಕಲಬುರಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಕಾಬಂಧಿ ನಡೆಸಿದ್ದರು.

ಪೊಲೀಸರಿಗೆ ಸಂತೋಷ್ ಕಲಬುರಗಿಯ ಇಂಡಸ್ಟ್ರಿಯಲ್ ಎಸ್ಟೇಟ್ ಪ್ರದೇಶದಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ವಿಶೇಷ ತಂಡ ಸ್ಥಳಕ್ಕೆ ತೆರಳಿ ಆರೋಪಿಯನ್ನು ಸುತ್ತುವರಿದು ಶರಣಾಗುವಂತೆ ಸೂಚನೆ ನೀಡಿತು. ಆದರೆ ಆರೋಪಿಯು ಪೊಲೀಸರ ಸೂಚನೆಯನ್ನು ಲೆಕ್ಕಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಸಂತೋಷ್ ಸ್ಥಳದಲ್ಲೇ ಕುಸಿದಿದ್ದು, ತಕ್ಷಣವೇ ಆತನನ್ನು ವಶಕ್ಕೆ ಪಡೆದ ಪೊಲೀಸರು ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆಯ ವೇಳೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳಿಗೂ ಗಾಯಗಳಾಗಿವೆ. ಆರೋಪಿಯ ಹಲ್ಲೆ ಯತ್ನದ ವೇಳೆ ಗಾಯಗೊಂಡಿದ್ದ ಅವರನ್ನು ಸಹ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಪ್ರಾಥಮಿಕ ಮಾಹಿತಿಯಂತೆ ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಸಂತೋಷ್ ಇದೀಗ ಪೊಲೀಸರ ವಶಕ್ಕೆ ಬಂದಿದ್ದಾನೆ. ಉಳಿದ ಇಬ್ಬರು ಆರೋಪಿಗಳಿಗಾಗಿ ವಿವಿಧ ಪೊಲೀಸ್ ತಂಡಗಳು ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸುತ್ತಿವೆ. ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿ ಮುಂದುವರಿದಿದ್ದು, ವಾಹನಗಳ ತಪಾಸಣೆಯನ್ನೂ ಪೊಲೀಸರು ಹೆಚ್ಚಿಸಿದ್ದಾರೆ.

ಘಟನೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ ವೇಳೆ ನಡೆದ ಘಟನೆ ಕುರಿತು ಸಂಪೂರ್ಣ ವರದಿ ಪಡೆಯಲಾಗುತ್ತಿದೆ. ಸದ್ಯ ಗಾಯಗೊಂಡ ಕೈದಿ ಸಂತೋಷ್ ಪೊಲೀಸ್ ಭದ್ರತೆಯಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

Exit mobile version