ಅರಬ್ಬಿ ಸಮುದ್ರದಲ್ಲಿ ಸಂಕಷ್ಟದಲ್ಲಿದ್ದ ಭಾರತೀಯ ಆರು ಸಿಬ್ಬಂದಿ ರಕ್ಷಣೆಗೆ ಧಾವಿಸಿದ ಪಾಕ್ ನೌಕಾಪಡೆ

BeFunky collage 2026 05 06T083456.328

ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಅಪಾಯದ ಅಂಚಿನಲ್ಲಿದ್ದ ಭಾರತೀಯ ಮೂಲದ ಹಡಗಿನ ಸಿಬ್ಬಂದಿಗೆ ಪಾಕಿಸ್ತಾನ ನೌಕಾಪಡೆ ಮಾನವೀಯ ನೆರವು ನೀಡಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷಗಳ ನಡುವೆಯೂ ಸಾಗರದ ಮಧ್ಯೆ ನಡೆದ ಈ ಘಟನೆ ‘ಮಾನವೀಯತೆ ಎಲ್ಲಕ್ಕಿಂತ ದೊಡ್ಡದು’ ಎಂಬ ಸಂದೇಶ ಸಾರಿದೆ.

ಎಂವಿ ಗೌತಮ್ ಹಡಗಿನ ರಕ್ಷಣೆ

ಒಮಾನ್‌ನಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ‘ಎಂವಿ ಗೌತಮ್’ ಎಂಬ ಹಡಗು ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ತಾಂತ್ರಿಕ ದೋಷಕ್ಕೆ ತುತ್ತಾಯಿತು. ಈ ಹಡಗಿನಲ್ಲಿ ಆರು ಮಂದಿ ಭಾರತೀಯರು ಮತ್ತು ಒಬ್ಬ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಒಟ್ಟು ಏಳು ಜನ ಸಿಬ್ಬಂದಿ ಇದ್ದರು. ಹಡಗು ಅರ್ಧದಲ್ಲೇ ಸ್ಥಗಿತಗೊಂಡಾಗ ಆತಂಕಕ್ಕೊಳಗಾದ ಸಿಬ್ಬಂದಿ ನೆರವಿಗಾಗಿ ಮೊರೆ ಇಟ್ಟಿದ್ದರು.

ಮುಂಬೈನಲ್ಲಿರುವ ಸಾಗರ ರಕ್ಷಣಾ ಮತ್ತು ಸಮನ್ವಯ ಕೇಂದ್ರವು ತಕ್ಷಣವೇ ಪಾಕಿಸ್ತಾನಿ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಕೋರಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ (PMSA), ತನ್ನ ನೌಕೆಯನ್ನು ಕಳುಹಿಸಿ ಸಂಕಷ್ಟದಲ್ಲಿದ್ದವರಿಗೆ ಆಹಾರ, ವೈದ್ಯಕೀಯ ನೆರವು ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಿದೆ.

ಪಾಕಿಸ್ತಾನದಲ್ಲಿ ಶೋಕ: ಖ್ಯಾತ ಧರ್ಮಗುರು ಇದ್ರೀಸ್‌ ಹತ್ಯೆ

ಒಂದೆಡೆ ಮಾನವೀಯ ಕಾರ್ಯದ ಸುದ್ದಿ ಬರುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಪಾಕ್‌ನ ಹಿರಿಯ ಧಾರ್ಮಿಕ ವಿದ್ವಾಂಸರಲ್ಲಿ ಒಬ್ಬರಾದ ಶೇಖ್‌- ಉಲ್‌- ಹದೀತ್‌ ಮೌಲಾನಾ ಮುಹಮ್ಮದ್ ಇದ್ರೀಸ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಚರ್ಸದ್ದಾ ಜಿಲ್ಲೆಯ ಉತ್ಮನ್‌ಜೈ ಎಂಬಲ್ಲಿ ಇದ್ರೀಸ್‌ ಅವರು ಧಾರ್ಮಿಕ ಉಪನ್ಯಾಸ ನೀಡಲು ಕಾರಿನಲ್ಲಿ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಲ್ಲಿ ಅವರ ಇಬ್ಬರು ಭದ್ರತಾ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.

Exit mobile version