ಒಡಿಶಾ: ರೂರ್ಕೆಲಾದಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಯಾ ಒನ್ ಏರ್ (IndiaOne Air) ಸಂಸ್ಥೆಗೆ ಸೇರಿದ ಸಣ್ಣ ಚಾರ್ಟರ್ ವಿಮಾನವೊಂದು ತಾಂತ್ರಿಕ ದೋಷದಿಂದ ಪತನಗೊಂಡಿದೆ. ಈ ಘಟನೆ ಒಡಿಶಾದಲ್ಲಿ ಶನಿವಾರ (ಜನವರಿ 10) ಮಧ್ಯಾಹ್ನ ಸಂಭವಿಸಿದೆ.
ವಿಮಾನದಲ್ಲಿದ್ದ ಪೈಲಟ್ ಸೇರಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದು, ಅಪಘಾತದಲ್ಲಿ ಎಲ್ಲರೂ ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ರೂರ್ಕೆಲಾ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ತಕ್ಷಣವೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಪೈಲಟ್ ವಿಮಾನವನ್ನು ಜನವಸತಿ ಪ್ರದೇಶದಿಂದ ದೂರವಿರುವ ಬಯಲು ಪ್ರದೇಶದಲ್ಲಿ ಇಳಿಸುವ ಪ್ರಯತ್ನ ಮಾಡಿದ್ದಾರೆ.
ವಿಮಾನವು ರೂರ್ಕೆಲಾ ನಗರದಿಂದ ಸುಮಾರು 10 ರಿಂದ 15 ಕಿಲೋಮೀಟರ್ ದೂರದ ಜಗದಾ ಬ್ಲಾಕ್ ಸಮೀಪದ ಏರ್ಸ್ಟ್ರಿಪ್ ಪ್ರದೇಶದ ಬಳಿ ಪತನಗೊಂಡಿದೆ. ಅಪಘಾತದ ಪರಿಣಾಮ ವಿಮಾನಕ್ಕೆ ಭಾರೀ ಹಾನಿಯಾಗಿದ್ದು, ಕೆಲ ಭಾಗಗಳು ಸಂಪೂರ್ಣವಾಗಿ ನಾಶವಾಗಿವೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದು, ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೈಲಟ್‌ನ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಉಳಿದ ಏಳು ಪ್ರಯಾಣಿಕರು ವಿವಿಧ ರೀತಿಯ ಗಾಯಗಳನ್ನು ಹೊಂದಿದ್ದು, ಅವರ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ತುರ್ತು ಸೇವಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವುದೇ ಗೊಂದಲ ಅಥವಾ ಆತಂಕ ಉಂಟಾಗದಂತೆ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಅಲ್ಲದೆ, ವಿಮಾನ ಪತನದ ನಿಖರ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
