ಚಿತ್ರದುರ್ಗ: ವಿಚ್ಛೇದಿತ ಪತ್ನಿಯ ಮೇಲೆ ದ್ವೇಷ ಸಾಧಿಸಿದ ಪತಿಯೊಬ್ಬ, ಆಕೆ ಸೇರಿದಂತೆ ಕುಟುಂಬದ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿ, ಬಳಿಕ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ.
ಪ್ರೀತಿ ಮದುವೆ, ಕಿರುಕುಳ ಮತ್ತು ವಿಚ್ಛೇದನ
ಚಿತ್ರದುರ್ಗದ ನೆಹರು ನಗರದ ನಿವಾಸಿಯಾದ ಸುಹೇಲ್ ಎಂಬಾತ ಈ ಕೃತ್ಯ ಎಸಗಿದ ಆರೋಪಿ. ಸುಹೇಲ್ ಮತ್ತು ತಾಸಿನಾ ಬಾನು ಈ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸುಹೇಲ್ ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ. ಈ ಕಿರುಕುಳ ತಾಳಲಾರದೆ ತಾಸಿನಾ ಬಾನು ತನ್ನ ಪತಿಯಿಂದ ದೂರವಾಗಿ, ಬೆಂಗಳೂರು ಸೇರಿಕೊಂಡಿದ್ದರು. ಇತ್ತೀಚೆಗಷ್ಟೇ ಇವರಿಬ್ಬರ ನಡುವೆ ಕಾನೂನಾತ್ಮಕವಾಗಿ ವಿಚ್ಛೇದನವೂ ನಡೆದಿತ್ತು.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ತಾಸಿನಾ ಬಾನು ಬೆಂಗಳೂರಿನಿಂದ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿರುವ ತನ್ನ ಸಹೋದರಿ ನೇಹಾ ಅವರ ಮನೆಗೆ ಬಂದಿದ್ದರು. ಈ ವಿಷಯ ತಿಳಿದ ಆರೋಪಿ ಸುಹೇಲ್, ಏಕಾಏಕಿ ಮನೆಗೆ ನುಗ್ಗಿ ತನ್ನ ಪತ್ನಿ ತಾಸಿನಾ ಬಾನು, ಪುತ್ರಿ ರೋಷನಿ, ಸಹೋದರಿ ನೇಹಾ, ನೇಹಾಳ ಪುತ್ರಿ ಇಕ್ರಾ ಮತ್ತು ಹಿರಿಯ ಸಹೋದರಿ ನಗ್ಮಾ ನಾಯ್ಕ್ ಮೇಲೆ ಆ್ಯಸಿಡ್ ಎರಚಿದ್ದಾನೆ. ಆ್ಯಸಿಡ್ ದಾಳಿಯಿಂದ ಚೀರಾಡುತ್ತಿದ್ದ ಪತ್ನಿಯ ಮೇಲೆ ಅಷ್ಟಕ್ಕೇ ನಿಲ್ಲದೆ ಮಚ್ಚಿನಿಂದಲೂ ಭೀಕರವಾಗಿ ಹಲ್ಲೆ ನಡೆಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, ಆಟೋ ಚಾಲಕನಾಗಿರುವ ಸುಹೇಲ್ ಈ ಕೃತ್ಯ ಎಸಗಿದ್ದಾನೆ. ಗಾಯಾಳುಗಳನ್ನು ತಕ್ಷಣ ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಸೆರೆಹಿಡಿಯಲಾಗುವುದು ಎಂದು ತಿಳಿಸಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
