ಲಕ್ನೋ: ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಪರ್ಚ್ ಗ್ರಾಮದಲ್ಲಿ ತನ್ನ ಪ್ರೇಯಸಿಯ ಬಲವಂತದ ಮದುವೆಯನ್ನು ತಡೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಥಳಿಸಿ ಕೊಂದಿರುವ ಘಟನೆ ನಡೆದಿದೆ. ಹತ್ಯೆಯಾದ ವ್ಯಕ್ತಿ ರವಿ (35). ಆತನ ಪ್ರೇಯಸಿ ಮನಿಷಾಳನ್ನು ಆಕೆಯ ಮನೆಯವರು ಬಲವಂತವಾಗಿ ಮದುವೆ ಮಾಡುತ್ತಿರುವುದನ್ನು ತಿಳಿದು, ಆಕೆಯನ್ನು ಭೇಟಿಯಾಗಲು ಗ್ರಾಮಕ್ಕೆ ತೆರಳಿದ್ದ. ಆದರೆ, ಈ ವಿಷಯ ತಿಳಿದ ಮನಿಷಾಳ ಕುಟುಂಬದವರು ಮತ್ತು ಗ್ರಾಮಸ್ಥರು ರವಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ರವಿಯ ಮೇಲೆ ಗ್ರಾಮಸ್ಥರು ಮತ್ತು ಮನಿಷಾಳ ಕುಟುಂಬದವರು ಒಟ್ಟಾಗಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರವಿ ಕುಡಿಯಲು ನೀರು ಕೇಳಿದ್ದಾನೆ, ಆದರೆ ಯಾರೂ ನೀರು ನೀಡಿಲ್ಲ. ಕೊನೆಗೆ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮನಿಷಾಳ ಚಿಕ್ಕಪ್ಪ ಪಿಂಟು ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪೊಲೀಸರು ರವಿ ಮತ್ತು ಪಿಂಟು ಇಬ್ಬರನ್ನೂ ಮೌದಾಹದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಆದರೆ, ವೈದ್ಯರು ರವಿ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಪಿಂಟುಗೆ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರವಿಯ ಸಾವಿನ ಸುದ್ದಿ ತಿಳಿದ ಮನಿಷಾ, ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮನಿಷಾ ಮತ್ತು ಪಿಂಟು ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಮನಿಷಾಳನ್ನು ಮೌದಾಹದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಪಿಂಟುನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ರವಿ ನಮ್ಮ ಮನೆಗೆ ಬಂದು ಕೋಪದಿಂದ ಕೂಗಾಡಿದ. ಬಾಗಿಲು ತೆರೆದಾಗ ನನ್ನ ಪತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಎಂದು ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ದೂರಿನ ಸತ್ಯಾಸತ್ಯತೆಯನ್ನು ತನಿಖೆ ನಡೆಸುತ್ತಿದ್ದಾರೆ.
 
			
 
					




 
                             
                             
                             
                             
                            