ನವದೆಹಲಿ: 2018ರಲ್ಲಿ ಮುಧೋಳದ ಕುಳಲಿ ಗ್ರಾಮದಲ್ಲಿರುವ ನಿರಾಣಿ ಶುಗರ್ಸ್‌ನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರು ಕಾರ್ಮಿಕರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಮುರುಗೇಶ್ ನಿರಾಣಿಯವರ ಪುತ್ರ ವಿಜಯ್ ನಿರಾಣಿ ವಿರುದ್ಧ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ 2023ರ ತಡೆಯಾಜ್ಞೆಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿ ಕಾನೂನುಬದ್ಧ ತನಿಖೆಗೆ ಆದೇಶಿಸಿದೆ, ಇದರಿಂದ ರಾಜ್ಯ ಸರ್ಕಾರಕ್ಕೆ ಮೇಲುಗೈ ಸಿಕ್ಕಂತಾಗಿದೆ.
2018ರ ಡಿಸೆಂಬರ್ 16ರಂದು, ಮುಧೋಳದ ಕುಳಲಿ ಗ್ರಾಮದಲ್ಲಿರುವ ನಿರಾಣಿ ಶುಗರ್ಸ್ ಲಿಮಿಟೆಡ್‌ನ ಡಿಸ್ಟಿಲರಿ ಘಟಕದ ತ್ಯಾಜ್ಯ ನಿರ್ವಹಣಾ ಘಟಕ (ಇಟಿಪಿ)ದಲ್ಲಿ ಬಾಯ್ಲರ್ ಸ್ಫೋಟಗೊಂಡಿತ್ತು. ಈ ದುರ್ಘಟನೆಯಲ್ಲಿ ಆರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟಕಕ್ಕೆ ಅಗತ್ಯ ಅನುಮತಿಗಳನ್ನು ಪಡೆಯದಿರುವುದು ಈ ಘಟನೆಗೆ ಕಾರಣವೆಂದು ಆರೋಪಿಸಲಾಗಿದೆ. ವಿಜಯ್ ನಿರಾಣಿ, ಈ ಕಂಪನಿಯ ನಿರ್ದೇಶಕರಾಗಿದ್ದು, ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಪೊಲೀಸರು 2019ರಲ್ಲಿ ವಿಜಯ್ ನಿರಾಣಿ ಮತ್ತು ಕಾರ್ಖಾನೆಯ ತಾಂತ್ರಿಕ ನಿರ್ದೇಶಕ ಎಂ.ಎಸ್.ಹಟ್ಟಿಕಲ್ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆಗೊಳಪಡಿಸಿದ್ದರು. ಆದರೆ, ವಿಜಯ್ ನಿರಾಣಿ ಹೈಕೋರ್ಟ್‌ಗೆ ಮೊರೆ ಹೋಗಿದ್ದು, 2023ರಲ್ಲಿ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ಈಗ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, ತನಿಖೆಗೆ ಮುಂದುವರಿಯಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.