ನವದೆಹಲಿ, (ಜುಲೈ 24): ದೇಶಾದ್ಯಂತ ತೀವ್ರ ಸ್ವರೂಪ ಪಡೆದಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ದೆಹಲಿಯ ಜಂತರ್ ಮಂತರ್ ಸೇರಿದಂತೆ ಹಲವು ನಗರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ, ಚಿತ್ರರಂಗ ಹಾಗೂ ಮನರಂಜನಾ ಕ್ಷೇತ್ರದ ಹಲವು ಗಣ್ಯರು ಕೂಡ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ಈ ನಡುವೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ತಮ್ಮ ದೆಹಲಿಯಲ್ಲಿ ನಡೆಯಬೇಕಿದ್ದ ಲೈವ್ ಸಂಗೀತ ಕಾರ್ಯಕ್ರಮವನ್ನು ಮುಂದೂಡುವ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜುಲೈ 25ರಂದು ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ‘ಬಾಸಿಟಿವಿಟಿ – ಸೋನು ನಿಗಮ್ ರಿಮೆಂಬರ್ಸ್ ರಫಿ’ ಎಂಬ ಹೆಸರಿನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ಆಗಸ್ಟ್ 15ಕ್ಕೆ ಮುಂದೂಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಸೋನು ನಿಗಮ್, “ದೇಶದ ವಿದ್ಯಾರ್ಥಿಗಳ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ” ಎಂದು ತಿಳಿಸಿದ್ದಾರೆ.
ಈ ನಿರ್ಧಾರಕ್ಕೂ ಮುನ್ನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರು ನೀಟ್ ಪ್ರತಿಭಟನೆ ಕುರಿತು ಪ್ರಶ್ನಿಸಿದಾಗ ಸೋನು ನಿಗಮ್ ಅಸಮಾಧಾನ ವ್ಯಕ್ತಪಡಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. “ನಾನು ಇಲ್ಲಿ ಬೇರೆ ಕಾರಣಕ್ಕೆ ಬಂದಿದ್ದೇನೆ… ಸಾಕು, ಈಗ ನಿಲ್ಲಿಸಿ” ಎಂದು ಅವರು ಹೇಳಿದ್ದ ದೃಶ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಕಾರ್ಯಕ್ರಮ ಮುಂದೂಡುವ ಮೂಲಕ ವಿದ್ಯಾರ್ಥಿಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುಭವ್ ಸಿಂಗ್ ಬಸ್ಸಿ ಕೂಡ ಜುಲೈ 25ರಂದು ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ತಮ್ಮ ಹಾಸ್ಯ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಈಗಾಗಲೇ ಟಿಕೆಟ್ ಖರೀದಿಸಿದ ಎಲ್ಲರಿಗೂ ಸಂಪೂರ್ಣ ಹಣವನ್ನು ಮರುಪಾವತಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ನಟಿ ಸೋಹಾ ಅಲಿ ಖಾನ್ ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ತಮ್ಮ ಪಾಡ್‌ಕಾಸ್ಟ್‌ನ ಮುಂದಿನ ಸಂಚಿಕೆಯನ್ನು ಮುಂದೂಡಿದ್ದಾರೆ. “ಈ ಕ್ಷಣದಲ್ಲಿ ನಮ್ಮ ಧ್ವನಿಗಿಂತ ವಿದ್ಯಾರ್ಥಿಗಳ ಧ್ವನಿಯೇ ದೇಶದಲ್ಲಿ ಹೆಚ್ಚು ಕೇಳಿಸಬೇಕು. ಅದಕ್ಕಾಗಿ ನಾವು ಒಂದು ಹೆಜ್ಜೆ ಹಿಂದೆ ಸರಿಯುತ್ತಿದ್ದೇವೆ“ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳು ಪಾರದರ್ಶಕ ತನಿಖೆ ಹಾಗೂ ನ್ಯಾಯಕ್ಕಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಈಗ ಸಿನಿರಂಗ ಮತ್ತು ಮನರಂಜನಾ ಕ್ಷೇತ್ರದ ಗಣ್ಯರು ಸಹ ಬೆಂಬಲ ಸೂಚಿಸುತ್ತಿರುವುದು ವಿದ್ಯಾರ್ಥಿಗಳ ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ.





