200ಕ್ಕೂ ಹೆಚ್ಚು ಸ್ಥಾನಗಳಿಂದ ಮುನ್ನಡೆಯಲ್ಲಿರುವ NDA: 500ಕೆಜಿ ಸಿಹಿ, 50 ಸಾವಿರ ಜನರಿಗೆ ಔತಣಕೂಟಕ್ಕೆ ತಯಾರಿ

Untitled design (35)

ಪಾಟ್ನಾ: 200ಕ್ಕೂ ಹೆಚ್ಚು ಸ್ಥಾನಗಳಿಂದ ಮುನ್ನಡೆಯಲ್ಲಿರುವ NDA ಮೈತ್ರಕೂಟ, 500ಕೆಜಿ ಸಿಹಿ, 50 ಸಾವಿರ ಜನರಿಗೆ ಔತಣಕೂಟಕ್ಕೆ ತಯಾರಿ ನಡೆಸುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆ 2025ರ ಫಲಿತಾಂಶಗಳು ಇಂದು ಹೊರಬೀಳುತ್ತಿದ್ದು, ರಾಷ್ಟ್ರೀಯ ರಾಜಕೀಯದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದಲ್ಲೇ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟ (NDA) ಭರ್ಜರಿ ಮುನ್ನಡೆ ಸಾಧಿಸಿದೆ. ಮತದಾನೋತ್ತರ ಸಮೀಕ್ಷೆಗಳು NDAಗೆ ಸ್ಪಷ್ಟ ಬಹುಮತ ಭವಿಷ್ಯ ನೀಡಿದ್ದು, ಕಳೆದ ಎರಡು ದಶಕಗಳಿಂದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರ ಆಡಳಿತ ಮತ್ತೊಮ್ಮೆ ಮುಂದುವರಿಯುವ ಸಾಧ್ಯತೆ ಬಲವಾಗಿದೆ.

ಪಾಟ್ನಾ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಸಿಂಗ್ ಕಲ್ಲೂ ಅವರು ಗೆಲುವಿನ ಸಂತೋಷಕ್ಕಾಗಿ 500 ಕಿಲೋಗ್ರಾಂ ಲಡ್ಡುಗಳಿಗೆ ಆರ್ಡರ್ ನೀಡಿದ್ದಾರೆ. ದೊಡ್ಡ ಅಡುಗೆ ಪಾತ್ರೆಯ ಮುಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಭಾವಚಿತ್ರಗಳನ್ನು ಅಲಂಕರಿಸಿ ಇರಿಸಲಾಗಿದೆ. ಈ ಪಾತ್ರೆಯಲ್ಲಿ ಲಡ್ಡುಗಳನ್ನು ತಯಾರಿಸಲಾಗುತ್ತಿದ್ದು, ದುಷ್ಟ ದೃಷ್ಟಿ ತೊಲಗಿಸಲು ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ಹತ್ತಿರದಲ್ಲಿ ನೇತುಹಾಕಲಾಗಿದೆ. ಮಧುಮೇಹ ರೋಗಿಗಳಿಗೂ ಸಿಹಿ ಸವಿಯಲು ಕಡಿಮೆ ಸಕ್ಕರೆಯೊಂದಿಗೆ ವಿಶೇಷ ಲಡ್ಡು ತಯಾರಿಸುತ್ತಿದ್ದೇವೆ ಎಂದು ತಯಾರಕ ಕಾರ್ಮಿಕರು ತಿಳಿಸಿದ್ದಾರೆ.

ಬಿಹಾರದ ಜನತೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮಕ್ಕೆ ಮತದಾನೋತ್ತರ ಸಮೀಕ್ಷೆಗಳು ಪ್ರತಿಫಲ ನೀಡಿವೆ. ಈ ಬಾರಿಯೂ NDA ಸರ್ಕಾರ ರಚಿಸಿ, ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಮುಂದುವರಿಯಲಿದೆ. ಈ ವಿಶ್ವಾಸ NDA ಕಾರ್ಯಕರ್ತರಲ್ಲಿ ಉತ್ಸಾಹದ ಅಲೆ ಎಬ್ಬಿಸಿದೆ ಎಂದು ಕೃಷ್ಣ ಸಿಂಗ್ ಕಲ್ಲ ಉತ್ಸಾಹದಿಂದ ಹೇಳಿದ್ದಾರೆ.

ಗೆಲುವಿನ ಸಂಭ್ರಮಕ್ಕೆ ಮತ್ತೊಂದು ಬಣ್ಣ ತಂದಿರುವುದು ಬಹುಚರ್ಚಿತ ನಾಯಕ ಅನಂತ್ ಸಿಂಗ್ ಕುಟುಂಬದ ಆಯೋಜನೆ. ಅವರ ಪತ್ನಿ ನೀಲಂ ದೇವಿ ಅವರ ನಿವಾಸದಲ್ಲಿ ಸುಮಾರು 50 ಸಾವಿರ ಜನರಿಗೆ ಅದ್ಧೂರಿ ಔತಣಕೂಟಕ್ಕೆ ಸಿದ್ಧತೆ ನಡೆಯುತ್ತಿದೆ. ಬೃಹತ್ ಶಾಮಿಯಾನಗಳು, ಅಲಂಕಾರಗಳು ಮತ್ತು ಅಡುಗೆ ಸಾಮಗ್ರಿಗಳೊಂದಿಗೆ ಕಾರ್ಮಿಕರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಈ ಔತಣಕೂಟಕ್ಕಾಗಿ 5 ಲಕ್ಷ ಗುಲಾಬ್ ಜಾಮೂನ್ ಮತ್ತು ರಸಗುಲ್ಲಾಗಳನ್ನು ತಯಾರಿಸಲಾಗುತ್ತಿದೆ. NDA ಗೆಲುವು ಬಿಹಾರದ ಜನರ ಗೆಲುವು. ಈ ಸಂತೋಷವನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತೇವೆ ಎಂದು ನೀಲಂ ದೇವಿ ತಿಳಿಸಿದ್ದಾರೆ.

ಇದು NDAಯ ಆತ್ಮವಿಶ್ವಾಸದ ಸಂಕೇತ. ಮತದಾನೋತ್ತರ ಸಮೀಕ್ಷೆಗಳು NDAಗೆ 200+ ಸ್ಥಾನಗಳನ್ನು ಭವಿಷ್ಯ ನುಡಿದ್ದು, ಆರಂಭಿಕ ಎಣಿಕೆಯೂ ಇದನ್ನು ದೃಢಪಡಿಸುತ್ತಿದೆ. ಪಾಟ್ನಾದ ಬೀದಿಗಳಲ್ಲಿ NDA ಕಾರ್ಯಕರ್ತರು ಡಿಜೆ, ಡೊಳ್ಳು-ಢಮ್ಮಕ್ಕೆ ನೃತ್ಯ ಮಾಡುತ್ತಿದ್ದಾರೆ. ಬ್ಯಾನರ್‌ಗಳು, ಫ್ಲೆಕ್ಸ್‌ಗಳು ಮತ್ತು ಮೋದಿ-ನಿತೀಶ್ ಭಾವಚಿತ್ರಗಳು ನಗರವನ್ನು ಆವರಿಸಿವೆ. ಎದುರಾಳಿ ಮಹಾಘಟಬಂಧನ್ ಮೌನಕ್ಕೆ ಮುಳುಗಿದ್ದು, ತೇಜಸ್ವಿ ಯಾದವ್ ಅವರ ನೇತೃತ್ವದಲ್ಲಿ ಆಂತರಿಕ ಚರ್ಚೆಗಳು ನಡೆಯುತ್ತಿವೆ. ಆದರೆ NDA ಶಿಬಿರದಲ್ಲಿ ಗೆಲುವಿನ ಉತ್ಸಾಹ ಮಾತ್ರ ತಾರಕಕ್ಕೇರಿದೆ.

ಈ ಫಲಿತಾಂಶಗಳು ಬಿಹಾರದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವುದಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ಇಂಡಿ ಒಕ್ಕೂಟಕ್ಕೆ ಆಘಾತ ನೀಡಲಿವೆ. ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಾಧ್ಯತೆ ಹೆಚ್ಚಿದೆ. ಬಿಹಾರದ ಜನತೆ ಅಭಿವೃದ್ಧಿ, ಸ್ಥಿರತೆ ಮತ್ತು NDAಯ ಭರವಸೆಗೆ ಮತ ಹಾಕಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

ಪಾಟ್ನಾದಲ್ಲಿ ಲಡ್ಡುಗಳ ಸುಗಂಧ, ಗುಲಾಬ್ ಜಾಮೂನ್‌ಗಳ ಸಿಹಿ ಮತ್ತು ಕಾರ್ಯಕರ್ತರ ಘೋಷಣೆಗಳು ಒಟ್ಟಾಗಿ ಗೆಲುವಿನ ಹಬ್ಬವನ್ನು ಆಚರಿಸುತ್ತಿವೆ. ಮತ ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆ NDAಯ ಸಂಭ್ರಮ ಇನ್ನಷ್ಟು ಗರಿಷ್ಠ ಮಟ್ಟಕ್ಕೇರುವುದು ಖಚಿತ.

Exit mobile version