ನಾಳೆ ಮೈಸೂರಿನಲ್ಲೇ ಗಾನಕೋಗಿಲೆ ಎಸ್‌. ಜಾನಕಿ ಅಂತ್ಯಸಂಸ್ಕಾರ

ಮೈಸೂರು, ಜು.11: ದಕ್ಷಿಣ ಭಾರತದ ಗಾನಕೋಗಿಲೆ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಹಿನ್ನೆಲೆ ಗಾಯಕಿ ಎಸ್‌. ಜಾನಕಿ ಅವರ ನಿಧನದಿಂದ ಸಂಗೀತ ಲೋಕ ಶೋಕ ಸಾಗರದಲ್ಲಿ ಮುಳುಗಿದೆ. ಅವರ ಅಗಲಿಕೆಯ ಬೆನ್ನಲ್ಲೇ ಅಂತ್ಯಸಂಸ್ಕಾರದ ಕುರಿತು ಜಿಲ್ಲಾಡಳಿತ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಸ್ವತಃ ಎಸ್‌. ಜಾನಕಿ ಅವರ ಕೊನೆಯ ಇಚ್ಛೆಯಂತೆ ಮೈಸೂರಿನಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.

ಜಿಲ್ಲಾಡಳಿತ, ಕುಟುಂಬ ಸದಸ್ಯರು ಹಾಗೂ ಸರ್ಕಾರದ ನಡುವೆ ನಡೆದ ಸುದೀರ್ಘ ಚರ್ಚೆಯ ಬಳಿಕ ಅಂತ್ಯಸಂಸ್ಕಾರದ ಸ್ಥಳ ಮತ್ತು ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಮುಖ್ಯಮಂತ್ರಿ ಅವರ ನಿರ್ದೇಶನದಂತೆ ಎಸ್‌. ಜಾನಕಿ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ನೀಡಲು ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜೀವನದ ಕೊನೆಯ ಕ್ಷಣದವರೆಗೂ ಮೈಸೂರಿನೊಂದಿಗೆ ವಿಶೇಷ ನಂಟು ಹೊಂದಿದ್ದ ಎಸ್‌. ಜಾನಕಿ, ತಮ್ಮ ಅಂತ್ಯಸಂಸ್ಕಾರವೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ನಡೆಯಬೇಕು ಎಂಬ ಆಸೆಯನ್ನು ಹಲವು ಬಾರಿ ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡಿದ್ದರು ಎನ್ನಲಾಗಿದೆ. ಅವರ ಆ ಅಂತಿಮ ಇಚ್ಛೆಯನ್ನು ಗೌರವಿಸಿ ಕುಟುಂಬ ಸದಸ್ಯರು ಸಹ ಒಪ್ಪಿಗೆ ಸೂಚಿಸಿದ್ದು, ಸರ್ಕಾರವೂ ಅದಕ್ಕೆ ಸ್ಪಂದಿಸಿದೆ.

ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ಮುಖ್ಯಮಂತ್ರಿ ದೂರವಾಣಿ ಮೂಲಕ ಸಂಪರ್ಕಿಸಿ ಎಸ್‌. ಜಾನಕಿ ಅವರಿಗೆ ರಾಜ್ಯದ ಪರವಾಗಿ ಅತ್ಯುನ್ನತ ಗೌರವ ಸಲ್ಲಿಸುವಂತೆ ಸೂಚಿಸಿದ್ದಾರೆ. ಅದರಂತೆ ಪೊಲೀಸ್ ಗೌರವ ಸೇರಿದಂತೆ ಎಲ್ಲ ಸರ್ಕಾರಿ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಭಿಮಾನಿಗಳು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ನಾಳೆ ಬೆಳಗ್ಗೆ 8 ಗಂಟೆಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸಾರ್ವಜನಿಕರು, ಕಲಾವಿದರು, ರಾಜಕೀಯ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಎಸ್‌. ಜಾನಕಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸದ್ಯ ಪಾರ್ಥಿವ ಶರೀರವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದ್ದು, ಆಸ್ಪತ್ರೆ ಆವರಣಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದಂತೆ ಸಚಿವರು ಮನವಿ ಮಾಡಿದ್ದಾರೆ. ಆಸ್ಪತ್ರೆ ಬಳಿ ಜನಸಂದಣಿ ಉಂಟಾದರೆ ಚಿಕಿತ್ಸೆ ಪಡೆಯುತ್ತಿರುವ ಇತರ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ನೇರವಾಗಿ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆಯುವಂತೆ ಮನವಿ ಮಾಡಲಾಗಿದೆ.

ಸಾರ್ವಜನಿಕ ದರ್ಶನ ಮುಕ್ತಾಯವಾದ ಬಳಿಕ ನಾಳೆ ಸಂಜೆ ಎಚ್‌.ಡಿ. ಕೋಟೆ ತಾಲೂಕಿನ ಬೋಗಾದಿರ ಕನಿಯನ ಹುಂಡಿಯಲ್ಲಿರುವ ಸಾಕು ಪುತ್ರ ನವೀನ್ ಅವರ ‘ನವೀನ್ ಫಾರ್ಮ್ ಹೌಸ್’ನಲ್ಲಿ ಎಸ್‌. ಜಾನಕಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕುಟುಂಬ ಸದಸ್ಯರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನಗಳು ನಡೆಯಲಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ನೀಡಲಾಗುತ್ತದೆ.

ಈ ವೇಳೆ ಎಸ್‌. ಜಾನಕಿ ಅವರ ಮೊಮ್ಮಗಳು ಅಪ್ಸಾರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಜಾನಕಿ ಅವರ ಏಕೈಕ ಪುತ್ರ ಈ ವರ್ಷದ ಜನವರಿಯಲ್ಲಿ ನಿಧನ ಹೊಂದಿದ್ದ ಹಿನ್ನೆಲೆ, ಕುಟುಂಬ ಸಂಪ್ರದಾಯದಂತೆ ಮಗನ ಮಗಳಾದ ಅಪ್ಸಾರ ಅವರಿಂದಲೇ ಅಂತಿಮ ಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Exit mobile version