ಮುಂಬೈ: ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಎನ್‌ಸಿಪಿ ನಾಯಕ ನರಹರಿ ಜಿರ್ವಾಲ್ ಅವರು ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಸಚಿವರ ಅಧಿಕೃತ ಬಂಗಲೆಯಲ್ಲಿ ತೃತೀಯಲಿಂಗಿಯೊಬ್ಬರ ಜೊತೆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯ ಬೆನ್ನಲ್ಲೇ ಪ್ರತಿಪಕ್ಷಗಳು ಜಿರ್ವಾಲ್ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿವೆ.
ಇದು ಜಿರ್ವಾಲ್ ಅವರಿಗೆ ಎರಡನೇ ದೊಡ್ಡ ಹಿನ್ನಡೆಯಾಗಿದೆ. ಇತ್ತೀಚೆಗಷ್ಟೇ ಮಂತ್ರಾಲಯದಲ್ಲಿ 35,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಎಫ್‌ಡಿಎ (FDA) ಗುಮಾಸ್ತನೊಬ್ಬ ಭ್ರಷ್ಟಾಚಾರ ನಿರೋಧಕ ದಳಕ್ಕೆ (ACB) ಸಿಕ್ಕಿಬಿದ್ದಿದ್ದ. ಈಗ ವೈರಲ್ ಆಗಿರುವ ವಿಡಿಯೋ ಸಚಿವರಿಗೆ ಮತ್ತೊಂದು ದೊಡ್ಡ ತಲೆನೋವಾಗಿದೆ.
ವಿಡಿಯೋದಲ್ಲಿರುವ ತೃತೀಯಲಿಂಗಿಯನ್ನು ಪವನ್ ಯಾದವ್ ಎಂದು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅವರ ಸಹೋದರ ಮತ್ತು ವಕೀಲ ರವಿ ಯಾದವ್ ಪ್ರಕಾರ, ಪವನ್ ಯಾದವ್ ಜನರನ್ನು ಮೋಸಗೊಳಿಸಿ ವಿಡಿಯೋ ಚಿತ್ರೀಕರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ಇತಿಹಾಸ ಹೊಂದಿದ್ದಾನೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
हा पायजमा वाला झिरवळ आहे का ?
याने चांगली च घरात हिरवळ आणून विडिओ काढलाय.
लै च बारा बोड्या चे असतेत डंगरे …https://t.co/ZZWu6gl4iW
— समर बालवडकर (@samspeaks19) March 25, 2026
ರಾಜಕೀಯ ಹಿನ್ನೆಲೆ ಏನು?
ಜಿರ್ವಾಲ್ ನಾಸಿಕ್ ಜಿಲ್ಲೆಯ ದಿಂಡೋರಿಯಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು ಮತ್ತು ವಿಧಾನಸಭೆಯ ಮಾಜಿ ಉಪಸಭಾಪತಿಯೂ ಆಗಿದ್ದರು. ಅವರು ದಿವಂಗತ ಅಜಿತ್ ಪವಾರ್ ಅವರ ಆಪ್ತರಾಗಿದ್ದರು. ಅಜಿತ್ ಪವಾರ್ ಅವರ ನಿಧನದ ನಂತರ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷರನ್ನಾಗಿ ಮಾಡಲು ಮೊದಲು ಧ್ವನಿ ಎತ್ತಿದವರೇ ಈ ಬುಡಕಟ್ಟು ನಾಯಕ ಜಿರ್ವಾಲ್.
ಅಜಿತ್ ಪವಾರ್ ಅವರ ನಿಧನದ ನಂತರ ಎನ್‌ಸಿಪಿ ಒಳಗಿನ ಆಂತರಿಕ ಕಲಹವೇ ಈ ವಿಡಿಯೋ ಸೋರಿಕೆಗೆ ಕಾರಣವಿರಬಹುದು ಎಂದು ಮೂಲಗಳು ತಿಳಿಸಿವೆ. ವಿಡಿಯೋದ ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ. ಜಿರ್ವಾಲ್ ಅವರು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಪಕ್ಷಗಳ ತೀವ್ರ ಆಕ್ರೋಶ:
ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿಪಕ್ಷಗಳು ಸಚಿವರ ರಾಜೀನಾಮೆಗೆ ಒತ್ತಡ ಹೇರಲು ಆರಂಭಿಸಿವೆ. ಶಿವಸೇನಾ (UBT) ನಾಯಕ ಸಂಜಯ್ ರಾವುತ್ “ಜಿರ್ವಾಲ್ ಯಾರೆಂದು ಎಲ್ಲರಿಗೂ ತಿಳಿದಿದೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಇದು ನಾಚಿಕೆಗೇಡಿನ ಸಂಗತಿ” ಎಂದು ಕಿಡಿಕಾರಿದ್ದಾರೆ.
