ಬೆಂಗಳೂರು: ನೆಲಮಂಗಲದ ಕಾಲೇಜು ಕ್ಲಾಸ್ ರೂಮ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಸಾರ್ವಜನಿಕವಾಗಿ ಪ್ರಪೋಸ್ ಮಾಡಿದ ಅಸಿಸ್ಟೆಂಟ್ ಪ್ರೊಫೆಸರ್‌ನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ನೆಲಮಂಗಲದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದು, ಬಂಧಿತ ಆರೋಪಿಯನ್ನು ಪ್ರೊಫೆಸರ್ ಅಬ್ದುಲ್ ಎಂದು ಗುರುತಿಸಲಾಗಿದೆ.
ಆರೋಪಿ ಅಬ್ದುಲ್ ಅವರು ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತರಗತಿ ನಡೆಯುತ್ತಿದ್ದ ವೇಳೆ ವೇದಿಕೆಯಲ್ಲೇ ನಿಂತು ಮೈಕ್ ಹಿಡಿದು ವಿದ್ಯಾರ್ಥಿನಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾರೆ. ಈ ವಿಚಿತ್ರ ವರ್ತನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನಿಸಿದ್ದಾಳೆ.
ಆಗ ಆರೋಪಿ ಅಬ್ದುಲ್, “ನೀನೇ ನನ್ನ ಚೇಂಬರ್ ಬಳಿ ಬಂದು ಪ್ರಪೋಸ್ ಮಾಡಿದ್ದೆ. ನನ್ನ ಬಳಿ ಸಿಸಿಟಿವಿ ಸಾಕ್ಷ್ಯ ಇದೆ” ಎಂದು ಎಲ್ಲರ ಮುಂದೆ ಆರೋಪ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಪ್ರಿನ್ಸಿಪಾಲರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾಳೆ.
ವಿದ್ಯಾರ್ಥಿಗಳಿಂದ ಧರ್ಮದೇಟು
ಪ್ರೊಫೆಸರ್‌ನ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ಹಾಗೂ ಇತರೆ ವಿದ್ಯಾರ್ಥಿಗಳು ಸೇರಿ ಆತನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆ ಗಂಭೀರವಾಗುತ್ತಿದ್ದಂತೆಯೇ ಕಾಲೇಜು ಆಡಳಿತ ಮಂಡಳಿಯು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಯ ಹಳೇ ಇತಿಹಾಸ ಬಯಲು
ಪೊಲೀಸ್ ತನಿಖೆಯ ವೇಳೆ ಆರೋಪಿ ಅಬ್ದುಲ್‌ನ ಹಳೆಯ ಇತಿಹಾಸ ಬಯಲಾಗಿದೆ. ಈತ ಈ ಹಿಂದೆಯೂ ಕೂಡ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಹಾಗೂ ತುಮಕೂರಿನ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಇದೇ ರೀತಿಯ ಕೃತ್ಯ ಎಸಗಿದ್ದ ಎನ್ನಲಾಗಿದೆ.
ಈ ಕಾರಣಕ್ಕಾಗಿಯೇ ಈತನಿಗೆ ಬುದ್ದಿವಾದ ಹೇಳಿ ತುಮಕೂರಿನ ಕಾಲೇಜಿನಿಂದ ಈ ಹಿಂದೆ ಹೊರಹಾಕಲಾಗಿತ್ತು. ವೈಯಕ್ತಿಕ ಜೀವನದಲ್ಲಿ ಪತ್ನಿಯಿಂದ ದೂರವಾಗಿದ್ದ ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂಬ ಮಾಹಿತಿಯೂ ಕೇಳಿಬಂದಿದೆ.
