ಅಧಿಕಾರದ ದಾಹಕ್ಕೆ ತನ್ನ ಆರು ವರ್ಷದ ಮಗಳನ್ನೇ ಕೊಂದ ತಂದೆ

Untitled design 2026 02 03T202252.669

ಮುಂಬೈ: ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಮಕ್ಕಳಿರಬೇಕು ಎಂಬ ನಿಯಮ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ, ವ್ಯಕ್ತಿಯೊಬ್ಬ ತನ್ನ ಆರು ವರ್ಷದ ಮಗಳನ್ನೇ ಕಾಲುವೆಗೆ ತಳ್ಳಿ ಕೊಲೆ ಮಾಡಿದ ಅಮಾನವೀಯ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ

ನಾಂದೇಡ್ ಜಿಲ್ಲೆಯ ಮುಖೇಡ್ ತಾಲ್ಲೂಕಿನ ಕೆರೂರ್ ಗ್ರಾಮದ ಪಾಂಡುರಂಗ ಕೊಂಡ್ಮಂಗಲೆ (28) ವೃತ್ತಿಯಲ್ಲಿ ಕ್ಷೌರಿಕ. ಈತನಿಗೆ ಆರು ವರ್ಷದ ಅವಳಿ ಹೆಣ್ಣು ಮಕ್ಕಳು ಹಾಗೂ ಮೂರು ವರ್ಷದ ಗಂಡು ಮಗುವಿತ್ತು. ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯಕ್ಕೆ ಪ್ರವೇಶಿಸಬೇಕೆಂಬುದು ಆಸೆ ಪಟ್ಟಿದ್ದ. ಆದರೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣಾ ನಿಯಮದಂತೆ, ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಸ್ಪರ್ಧಿಸಲು ಅನರ್ಹರಾಗಿರುತ್ತಾರೆ.

ತನಗಿರುವ ಮೂವರು ಮಕ್ಕಳಿಂದಾಗಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾಂಡುರಂಗ ತನ್ನ ಗೆಳೆಯ ಹಾಗೂ ಹಾಲಿ ಸರಪಂಚ್ ಗಣೇಶ್ ಶಿಂಧೆ ಎಂಬಾತನ ಬಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದ. ಈ ವೇಳೆ ಸರಪಂಚ್ ಗಣೇಶ್, ಅವಳಿ ಮಕ್ಕಳಲ್ಲಿ ಒಬ್ಬಳನ್ನು ಕೊಂದುಬಿಡು, ಆಗ ಇಬ್ಬರೇ ಮಕ್ಕಳು ಉಳಿಯುತ್ತಾರೆ. ನಿನಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಎಂಬ ವಿಕೃತ ಸಲಹೆ ನೀಡಿದ್ದ. ಮೊದಲು ಮಗುವನ್ನು ದತ್ತು ನೀಡಲು ಯೋಚಿಸಿದರೂ, ದಾಖಲೆಗಳಲ್ಲಿ ಮಗುವಿನ ಹೆಸರು ಉಳಿಯುತ್ತದೆ ಎಂಬ ಕಾರಣಕ್ಕೆ ಕೊನೆಗೆ ಕೊಲ್ಲಲು ನಿರ್ಧರಿಸಿದ.

ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

ಫೆಬ್ರವರಿ 1ರ ಸುಮಾರಿಗೆ ಪಾಂಡುರಂಗ ತನ್ನ ಮಗಳು ಪ್ರಾಚಿಯನ್ನು ಬೈಕ್‌ನಲ್ಲಿ ಕರೆದುಕೊಂಡು ನೆರೆಯ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಗೆ ತೆರಳಿದ್ದ. ಅಲ್ಲಿ ಜನರಿಲ್ಲದ ಸಮಯ ನೋಡಿ, ನಿಜಾಮ್ ಸಾಗರ್ ಕಾಲುವೆಗೆ ಮಗುವನ್ನು ತಳ್ಳಿ ಪರಾರಿಯಾಗಿದ್ದ. ಕಾಲುವೆಯಲ್ಲಿ ಶವ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.

ಸೋಷಿಯಲ್ ಮೀಡಿಯಾದಿಂದ ಸಿಕ್ಕಿಬಿದ್ದ ಹಂತಕ

ಪ್ರಾಚಿಯ ಶವ ಪತ್ತೆಯಾದಾಗ ಆಕೆ ಯಾರೆಂದು ತಿಳಿದಿರಲಿಲ್ಲ. ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಫೋಟೋ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಕೆರೂರ್ ಗ್ರಾಮದ ವ್ಯಕ್ತಿಯೊಬ್ಬರು ಮಗುವನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತನಿಖೆ ಆರಂಭಿಸಿದಾಗ ಮೊದಲು ಪಾಂಡುರಂಗ, ಮಗಳು ಆಸ್ಪತ್ರೆಯಲ್ಲಿದ್ದಾಳೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದ. ಆದರೆ ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಅಧಿಕಾರದ ಆಸೆಗಾಗಿ ಮಗಳನ್ನೇ ಕೊಂದ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

ಸದ್ಯ ಪೊಲೀಸರು ಹಂತಕ ತಂದೆ ಪಾಂಡುರಂಗ ಮತ್ತು ಕೊಲೆಗೆ ಪ್ರಚೋದನೆ ನೀಡಿದ ಸರಪಂಚ್ ಗಣೇಶ್ ಶಿಂಧೆಯನ್ನು ಬಂಧಿಸಿದ್ದಾರೆ.

Exit mobile version