ತೆಲಂಗಾಣದಲ್ಲಿ ಶಾಲೆಯ ಪ್ರಾಂಶುಪಾಲರನ್ನೇ ಕೊಂದ ಇಬ್ಬರು ವಿದ್ಯಾರ್ಥಿಗಳು..!

ಡೀಸೆಲ್ ಬೆಲೆ (7)

ನಲ್ಗೊಂಡ: ಪೋಷಕರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಕ್ಕೆ ಶಾಲೆಯ ಪ್ರಾಂಶುಪಾಲೆಯನ್ನೇ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯಲ್ಲಿ ನಡೆದಿದೆ. ಕಲ್ಲು ರೂಪಾ ರೆಡ್ಡಿ (48) ಎಂಬ ಪ್ರಾಂಶುಪಾಲೆಯನ್ನು ವಿದ್ಯಾರ್ಥಿಗಳು 27 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಕೊಂಡಮಲ್ಲೇಪಲ್ಲಿಯ ನಾಗಾರ್ಜುನ್ ಪಬ್ಲಿಕ್ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿ ಹಾಗೂ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ರೂಪಾ ರೆಡ್ಡಿ, ವಿದ್ಯಾರ್ಥಿಗಳ ದುಬಾರಿ ಜೀವನಶೈಲಿ ಮತ್ತು ಅತಿಯಾದ ಖರ್ಚಿನ ಬಗ್ಗೆ ಪ್ರಶ್ನಿಸಿದ್ದರು ಎನ್ನಲಾಗಿದೆ. ಹಾಸ್ಟೆಲ್‌ನಲ್ಲಿ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಬಳಿ ಹಣ ಮತ್ತು ಮೊಬೈಲ್ ಪತ್ತೆಯಾಗಿದ್ದ ಹಿನ್ನೆಲೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ರೂಪಾ ರೆಡ್ಡಿ, ಈ ವಿಚಾರವನ್ನು ಪೋಷಕರಿಗೆ ತಿಳಿಸುವುದಾಗಿ ಎಚ್ಚರಿಸಿದ್ದರು. ಇದೇ ವಿಚಾರದಲ್ಲಿ ಇಬ್ಬರು ಬಾಲಕರಲ್ಲಿ ಆಕ್ರೋಶಕ್ಕೆ ಕಾರಣವಾಗಿ ಕೊಲೆ ಸಂಚಿಗೆ ದಾರಿ ಮಾಡಿಕೊಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರು ವಿದ್ಯಾರ್ಥಿಗಳು ಐಫೋನ್, ಬೈಕ್ ಸೇರಿದಂತೆ ದುಬಾರಿ ವಸ್ತುಗಳ ಖರೀದಿ ಹಾಗೂ ಐಷಾರಾಮಿ ಜೀವನ ನಡೆಸುವ ಆಸೆ ಹೊಂದಿದ್ದರು. ಸುಲಭವಾಗಿ ಹಣ ಸಂಪಾದಿಸುವ ಮಾರ್ಗಗಳಿಗಾಗಿ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಬಳಿಕ ಪ್ರಾಂಶುಪಾಲೆಯ ಮನೆಯಲ್ಲಿ ಹಣ ಇರುವ ಬಗ್ಗೆ ಮಾಹಿತಿ ಪಡೆದು ದರೋಡೆ ಹಾಗೂ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.

ಕೊಲೆಗೂ ಮುನ್ನ ಸುಮಾರು ಒಂದು ವಾರದ ಕಾಲ ರೂಪಾ ರೆಡ್ಡಿ ಅವರ ಮನೆಯ ಸುತ್ತಮುತ್ತ ವಿದ್ಯಾರ್ಥಿಗಳು ಗಮನ ಹರಿಸಿದ್ದರು ಎನ್ನಲಾಗಿದೆ. ಬಳಿಕ ಚಾಕು, ಮುಖವಾಡ ಮತ್ತು ಕೈಗವಸುಗಳನ್ನು ಸಿದ್ಧಪಡಿಸಿಕೊಂಡು ಮನೆಯ ಹಿಂಬಾಗಿಲಿನಿಂದ ಒಳನುಗ್ಗಿದ್ದಾರೆ. ಆ ಸಂದರ್ಭದಲ್ಲಿ ರೂಪಾ ರೆಡ್ಡಿ ಅವರು ತಮ್ಮ ಸಂಬಂಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಅವರ ಮೇಲೆ ದಾಳಿ ನಡೆಸಿ 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ಬಳಿಕ ಮನೆಯಲ್ಲಿದ್ದ ನಗದು ಹಾಗೂ ಮೊಬೈಲ್‌ಗಳನ್ನು ಕದ್ದುಕೊಂಡು ಇಬ್ಬರೂ ವಿದ್ಯಾರ್ಥಿಗಳು ಪರಾರಿಯಾಗಿದ್ದರು. ತನಿಖೆ ನಡೆಸುತ್ತಿದ್ದ ಪೊಲೀಸರು ಡೊನಿಯಾಲ ಎಕ್ಸ್‌ರೋಡ್ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಅವರ ಬಳಿ ಪತ್ತೆಯಾದ ನೋಟುಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದು, ಅನುಮಾನ ಮೂಡಿತ್ತು..

ಆರೋಪಿಗಳಿಂದ ₹1.54 ಲಕ್ಷ ನಗದು, ರಕ್ತಸಿಕ್ತ ಚಾಕು, ಕೈಗವಸುಗಳು ಹಾಗೂ ಕದ್ದ ಹಣದಲ್ಲಿ ಸುಮಾರು ₹60 ಸಾವಿರ ನೀಡಿ ಖರೀದಿಸಿದ್ದ ಹೊಸ ಐಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ನಲ್ಗೊಂಡ ಎಸ್‌ಪಿ ಶರತ್ ಚಂದ್ರ ಪವಾರ್ ನೇತೃತ್ವದಲ್ಲಿ ಐದು ವಿಶೇಷ ತಂಡಗಳು ನಡೆಸಿವೆ. ಸುಮಾರು 30 ಕಿಲೋಮೀಟರ್ ವ್ಯಾಪ್ತಿಯ 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ ಬಳಿಕ ಆರೋಪಿಗಳ ಸುಳಿವು ಪತ್ತೆಯಾಗಿದೆ. ಇದೀಗ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. 

 

Exit mobile version