ಗಂಡ ವಾಪಸ್ ಬರುತ್ತಾನೆಂದು ಹೇಳಿದ್ದ ಸ್ವಾಮೀಜಿ: ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

ಡೀಸೆಲ್ ಬೆಲೆ (4)

ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಶೀಕರಣ, ಮಾಟ–ಮಂತ್ರ ಹಾಗೂ ಜ್ಯೋತಿಷ್ಯಕ್ಕೆ ಸಂಬಂಧಿಸಿದ ರೀಲ್ಸ್‌ಗಳನ್ನು ನಂಬಿ ಮೋಸ ಹೋಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ರೀತಿಯ ಪ್ರಕರಣವೊಂದು ನೆಲಮಂಗಲದಲ್ಲಿ ಬೆಳಕಿಗೆ ಬಂದಿದ್ದು, ಸತಿ–ಪತಿ ಕಲಹ ಬಗೆಹರಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ₹1.30 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವಶೀಕರಣಕ್ಕೆ ಸಂಬಂಧಿಸಿದ ರೀಲ್ಸ್‌ಗಳನ್ನು ಹಾಕುತ್ತಿದ್ದ ಆರೋಪಿ, ತನ್ನನ್ನು ವಶೀಕರಣ ಸ್ಪೆಷಲಿಸ್ಟ್ ಹಾಗೂ ವಿಶೇಷ ಪೂಜೆ ಮಾಡುವ ವ್ಯಕ್ತಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈತನ ರೀಲ್ಸ್‌ಗಳನ್ನು ನೋಡಿದ ಮಹಿಳೆ ದೀಪಿಕಾ, ತನ್ನ ವೈವಾಹಿಕ ಸಮಸ್ಯೆ ಬಗೆಹರಿಸಿಕೊಳ್ಳುವ ಉದ್ದೇಶದಿಂದ ಆತನನ್ನು ಸಂಪರ್ಕಿಸಿದ್ದರು.

ದೀಪಿಕಾ ಅವರ ಪತಿ ವಿಶ್ವ ಮದುವೆಯಾದ ಕೇವಲ 24 ದಿನಕ್ಕೆ ಮುನಿಸಿಕೊಂಡು ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ಪತಿ ವಾಪಸ್ ಬರುವಂತೆ ಮಾಡಲು ಏನು ಮಾಡಬೇಕು ಎಂಬ ಆತಂಕದಲ್ಲಿದ್ದ ಮಹಿಳೆಗೆ ಆರೋಪಿ, ವಿಶೇಷ ಪೂಜೆ ಮಾಡಿಸಿದರೆ ಗಂಡ ಮರಳಿ ಬರುತ್ತಾನೆ ಎಂದು ನಂಬಿಕೆ ಮೂಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಾತುಗಳನ್ನು ನಂಬಿದ ಮಹಿಳೆಯಿಂದ ಆರೋಪಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾನೆ. ಪತಿ–ಪತ್ನಿಯ ನಡುವಿನ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿ ವಿವಿಧ ಪೂಜೆ ಹಾಗೂ ವಶೀಕರಣದ ಹೆಸರಿನಲ್ಲಿ ಒಟ್ಟು ₹1.30 ಲಕ್ಷ ಹಣ ಪಡೆದಿದ್ದಾನೆ ಎನ್ನಲಾಗಿದೆ. ಆದರೆ ಹಣ ಪಡೆದ ಬಳಿಕವೂ ಯಾವುದೇ ಪರಿಹಾರ ದೊರೆಯದ ಹಿನ್ನೆಲೆ ಮಹಿಳೆಗೆ ಅನುಮಾನ ಮೂಡಿದೆ.

ವಿಶೇಷ ಪೂಜೆ ನಡೆಸುವುದಾಗಿ ಹೇಳಿ ಹಣ ಪಡೆದು ವಂಚಿಸಿರುವುದು ಅರಿವಿಗೆ ಬಂದ ಬಳಿಕ ದೀಪಿಕಾ ತ್ಯಾಮಗೊಂಡ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಿ ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ತನಿಖೆಯ ವೇಳೆ ಪೊಲೀಸರಿಗೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ವಶೀಕರಣ ಹಾಗೂ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಹೇಳಿಕೊಂಡು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ಗಳನ್ನು ಪ್ರಕಟಿಸುತ್ತಿದ್ದ ವ್ಯಕ್ತಿ ಯಾವುದೇ ವಿಶೇಷ ಶಕ್ತಿಯುಳ್ಳ ಸ್ವಾಮೀಜಿ ಅಲ್ಲ, ಕೇವಲ 19 ವರ್ಷದ ಯುವಕ ಎಂಬುದು ಪತ್ತೆಯಾಗಿದೆ.

ಆರೋಪಿಯನ್ನು ರೋಹಿತ್ ಕಲ್ಯಾಣ್ ಎಂದು ಗುರುತಿಸಲಾಗಿದ್ದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶಿವಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ವಂಚನೆಗೆ ಸಂಬಂಧಿಸಿದ ₹1.30 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Exit mobile version