ಕಲ್ಲಂಗಡಿ ತಿಂದು ಒಂದೇ ಕುಟುಂಬದ ನಾಲ್ವರ ಸಾ*ವು ಪ್ರಕರಣ: ಹಣ್ಣಿನಲ್ಲಿ ಪತ್ತೆಯಾಯ್ತು ಇಲಿ ಪಾಷಾಣ!

Untitled design 2026 05 07T223344.967

ಮುಂಬೈ: ಮುಂಬೈನ ಪೈಧೋನಿ ಪ್ರದೇಶದಲ್ಲಿ ಕೇವಲ ಕಲ್ಲಂಗಡಿ ಹಣ್ಣು ತಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ಸತ್ತವರು ತಿಂದ ಕಲ್ಲಂಗಡಿ ಹಣ್ಣಿನಲ್ಲಿಇಲಿ ಪಾಷಾಣ (ಜಿಂಕ್ ಫಾಸೈಡ್)ನ ಪ್ರಮಾಣ ಪತ್ತೆಯಾಗಿದೆ.

ಕಳೆದ ಏಪ್ರಿಲ್ 25ರಂದು ಮುಂಬೈನ ಜೆಜೆ ಮಾರ್ಗ ಪ್ರದೇಶದ ನಿವಾಸಿಗಳಾದ ಅಬ್ದುಲ್ಲಾ (40), ಅವರ ಪತ್ನಿ ನಜ್ರನ್ (35), ಪುತ್ರಿಯರಾದ ಜೈನಾಬ್ (13) ಹಾಗೂ ಆಯೇಷಾ (16) ಅವರು ತಮ್ಮ ಮನೆಯಲ್ಲಿ ಆತ್ಮೀಯರಿಗಾಗಿ ಔತಣಕೂಟವನ್ನು ಆಯೋಜಿಸಿದ್ದರು. ರಾತ್ರಿಯ ಸಮಯದಲ್ಲಿ ಅವರು ಐವರು ಅತಿಥಿಗಳ ಜೊತೆ ಸೇರಿ ಬಿರಿಯಾನಿ ಸವಿದರು. ಅತಿಥಿಗಳು ಮರಳಿದ ನಂತರ ಮಧ್ಯರಾತ್ರಿಯಲ್ಲಿ ಈ ಕುಟುಂಬದವರು ಕಲ್ಲಂಗಡಿ ಹಣ್ಣನ್ನು ತಿಂದರು.

ಆದರೆ ಹಣ್ಣು ತಿಂದ ಕೆಲವೇ ಕ್ಷಣಗಳಲ್ಲಿ ಎಲ್ಲರಿಗೂ ತೀವ್ರ ವಾಂತಿ, ತಲೆಸುತ್ತು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಮೃತಪಟ್ಟರು.

ವರದಿಯಲ್ಲಿ ‘ಇಲಿ ಪಾಷಾಣ’ ಪತ್ತೆ

ಈ ದುರಂತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ಮೃತರ ದೇಹದ ಅಂಗಾಂಶಗಳ ಮಾದರಿ (ವಿಸೇರಾ) ಸೇರಿದಂತೆ ಉಳಿದ ಆಹಾರದ ಮಾದರಿಗಳನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಿದ್ದರು. ಗುರುವಾರ ಬಂದ ವರದಿಯಲ್ಲಿ ಅಂಶವೊಂದು ಹೊರಬಿದ್ದಿದೆ. ಕಲ್ಲಂಗಡಿ ಹಣ್ಣಿನಲ್ಲಿ ‘ಜಿಂಕ್ ಫಾಸೈಡ್’ ಎಂಬ ವಿಷಕಾರಿ ಅಂಶ ಪತ್ತೆಯಾಗಿದೆ.

‘ಜಿಂಕ್ ಫಾಸೈಡ್’ ಅನ್ನು ಸಾಮಾನ್ಯವಾಗಿ ಇಲಿಗಳನ್ನು ನಿಯಂತ್ರಿಸಲು ಬಳಸುವ ವಿಷದಲ್ಲಿ ಕಲಬೆರಕೆ ಮಾಡಲಾಗುತ್ತದೆ. ಇದು ಮಾರಕವಾಗಿದ್ದು, ಸೇವಿಸಿದ ತಕ್ಷಣವೇ ದೇಹದ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಈ ವಿಷ ಹೇಗೆ ಬಂತು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಮುಂಬೈ ವಲಯದ ಡಿಸಿಪಿ ಪ್ರವೀಣ್ ಮುಂಡೆ ಅವರ ಪ್ರಕಾರ, ಪ್ರಕರಣದ ತನಿಖೆ ಮುಂದುವರಿದಿದೆ. “ಮೃತರ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಪಡೆದುಕೊಳ್ಳಲಾಗಿದೆ. ಹೆಚ್ಚಿನ ತಪಾಸಣೆಗಾಗಿ ಎಲ್ಲಾ ಆಹಾರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಲ್ಲಂಗಡಿಯಲ್ಲಿ ವಿಷಕಾರಿ ಅಂಶ ಉದ್ದೇಶಪೂರ್ವಕವಾಗಿ ಬೆರೆಸಲಾಗಿದೆಯೇ, ಅಥವಾ ಹಣ್ಣಿನ ಬೆಳೆ ಮತ್ತು ಸಂಗ್ರಹಣೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೋಂಕು ತಗುಲಿದೆಯೇ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ” ಎಂದು ಅವರು ತಿಳಿಸಿದ್ದಾರೆ.

Exit mobile version