ತಮಿಳುನಾಡಿನ ಪ್ರಸಿದ್ಧ ಹಾಗೂ ಐತಿಹಾಸಿಕ ದೇವಸ್ಥಾನಗಳ ಧಾರ್ಮಿಕ ಪಾವಿತ್ರ್ಯತೆ, ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ 52 ಪ್ರಮುಖ ದೇವಸ್ಥಾನಗಳ ಆವರಣದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE) ಹೊರಡಿಸಿರುವ ಈ ಹೊಸ ನಿಯಮ ಮಂಗಳವಾರದಿಂದಲೇ ಜಾರಿಗೆ ಬಂದಿದೆ.
ದೇವಸ್ಥಾನಗಳ ಒಳಗೆ ಭಕ್ತರು ಸೆಲ್ಫಿ ತೆಗೆದುಕೊಳ್ಳುವುದು, ಫೋಟೋ-ವಿಡಿಯೋ ಮಾಡುವುದು ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಚಿತ್ರೀಕರಿಸುವುದನ್ನು ತಡೆಯುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಗರ್ಭಗುಡಿಯ ವಿಗ್ರಹಗಳು, ಪೂಜಾ ಕೈಂಕರ್ಯಗಳು ಮತ್ತು ವಿಶೇಷ ಧಾರ್ಮಿಕ ಆಚರಣೆಗಳ ದೃಶ್ಯಗಳನ್ನು ಅನಧಿಕೃತವಾಗಿ ಚಿತ್ರೀಕರಿಸುವುದಕ್ಕೂ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ.
ದೇವಸ್ಥಾನ ಪ್ರವೇಶಕ್ಕೂ ಮುನ್ನ ಮೊಬೈಲ್ ಠೇವಣಿ
ಹೊಸ ನಿಯಮದ ಪ್ರಕಾರ, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪ್ರವೇಶದ್ವಾರದಲ್ಲಿರುವ ವಿಶೇಷ ಕೌಂಟರ್‌ಗಳಲ್ಲಿ ಠೇವಣಿ ಇಡಬೇಕು. ಪ್ರತಿ ಮೊಬೈಲ್‌ಗೆ 5 ರೂಪಾಯಿ ನಿರ್ವಹಣಾ ಶುಲ್ಕ ಪಾವತಿಸಿದ ಬಳಿಕ ಟೋಕನ್ ಅಥವಾ ಕಂಪ್ಯೂಟರೀಕೃತ ರಸೀದಿ ನೀಡಲಾಗುತ್ತದೆ. ಪೂಜೆ ಮುಗಿದ ನಂತರ ರಸೀದಿ ತೋರಿಸಿ ಮೊಬೈಲ್‌ನ್ನು ವಾಪಸ್ ಪಡೆಯಬಹುದು.
ಆದರೆ ಕ್ಯಾಮೆರಾ ಇಲ್ಲದ ಸಾಮಾನ್ಯ ಕೀಪ್ಯಾಡ್ ಅಥವಾ ಬೇಸಿಕ್ ಮೊಬೈಲ್‌ಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಇಂತಹ ಫೋನ್‌ಗಳನ್ನು ಭಕ್ತರು ದೇವಸ್ಥಾನದೊಳಗೆ ಕೊಂಡೊಯ್ಯಬಹುದಾಗಿದೆ.
ಕಾಂಚೀಪುರಂನಲ್ಲಿ ಮೊದಲ ಹಂತದ ಜಾರಿ
ಕಾಂಚೀಪುರಂನ ಪ್ರಸಿದ್ಧ ದೇವರಾಜಸ್ವಾಮಿ-ಅತ್ತಿ ವರದರ್ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಭಕ್ತರ ಮೊಬೈಲ್ ಸಂಖ್ಯೆ ಮತ್ತು ಫೋನ್ ಮಾದರಿಯ ವಿವರಗಳನ್ನು ದಾಖಲಿಸಿಕೊಂಡು ಕಂಪ್ಯೂಟರೀಕೃತ ರಸೀದಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ.
ದೇವಸ್ಥಾನದ ಪ್ರಶಾಂತ ವಾತಾವರಣ ಕಾಪಾಡಲು ಈ ಕ್ರಮ ಅಗತ್ಯ ಎಂದು ಹಲವರು ಸ್ವಾಗತಿಸಿದ್ದಾರೆ. ಆದರೆ ಪ್ರತಿಬಾರಿಯೂ 5 ರೂಪಾಯಿ ಶುಲ್ಕ ಪಾವತಿಸುವುದು ಹಾಗೂ ಮೊಬೈಲ್ ಠೇವಣಿ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವುದಕ್ಕೆ ಕೆಲ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದುಬಾರಿ ಸ್ಮಾರ್ಟ್‌ಫೋನ್‌ಗಳ ಸುರಕ್ಷತೆ ಬಗ್ಗೆಯೂ ಕೆಲವು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಶುಲ್ಕ ಸರ್ಕಾರದ ಆದಾಯಕ್ಕೆ ಅಲ್ಲ
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸ್ಪಷ್ಟನೆ ನೀಡಿದ್ದು, ಸಂಗ್ರಹಿಸುವ 5 ರೂಪಾಯಿ ಶುಲ್ಕವನ್ನು ಸರ್ಕಾರದ ಆದಾಯವಾಗಿ ಬಳಸಲಾಗುವುದಿಲ್ಲ. ಮೊಬೈಲ್ ಠೇವಣಿ ಕೌಂಟರ್‌ಗಳ ಸಿಬ್ಬಂದಿ ವೇತನ, ಭದ್ರತಾ ಲಾಕರ್‌ಗಳ ನಿರ್ವಹಣೆ ಮತ್ತು ಅಗತ್ಯ ಮೂಲಸೌಕರ್ಯಕ್ಕಾಗಿ ಈ ಮೊತ್ತವನ್ನು ಬಳಸಲಾಗುತ್ತದೆ ಎಂದು ತಿಳಿಸಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆ
ಮೊಬೈಲ್ ಫೋನ್‌ಗಳ ಬಳಕೆ ನಿಷೇಧಿಸುವ ಕ್ರಮಕ್ಕೆ ಕಾನೂನು ಹಿನ್ನೆಲೆಯೂ ಇದೆ. ತಿರುಚೆಂಡೂರಿನ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮೊಬೈಲ್ ಬಳಕೆಗೆ ನಿಷೇಧ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, 2022ರ ಡಿಸೆಂಬರ್‌ನಲ್ಲಿ ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಮೊಬೈಲ್ ನಿಷೇಧ ಜಾರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ತಮಿಳುನಾಡಿನ ಈ ಕ್ರಮವು ದೇಶದ ಇತರ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿರುವ ಮೊಬೈಲ್ ನಿರ್ಬಂಧಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ದೇವಸ್ಥಾನಗಳ ಗರ್ಭಗುಡಿ ಹಾಗೂ ಒಳಾಂಗಣದಲ್ಲೂ ಮೊಬೈಲ್ ಬಳಕೆಗೆ ಈಗಾಗಲೇ ನಿರ್ಬಂಧವಿದೆ.
